ಪುತ್ತೂರು: ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ‘ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸೆಮಿಫೈನಲ್ ವೇಳೆ, ಎಲ್‌ಬಿಡಬ್ಲ್ಯು ತೀರ್ಪು ನೀಡಿದ ತೀರ್ಪುಗಾರನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಈ ಪಂದ್ಯಾಟಕ್ಕೆ ಮಂಗಳೂರಿನ ರೋಲನ್ ಪಿಂಟೋ ಅವರು ಕ್ರಿಕೆಟ್ ತೀರ್ಪುಗಾರರಾಗಿ ಆಗಮಿಸಿದ್ದರು. ಈ ವೇಳೆ ಮಂಗಳೂರು ಕಾನಾ ಮತ್ತು ಕೆಜಿಎಫ್ ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು.
ಪಂದ್ಯಾಟದ ವೇಳೆ ಎಲ್‌ಬಿಡಬ್ಲ್ಯು ತೀರ್ಪನ್ನು ಸಮಗ್ರವಾಗಿ ಪರಿಶೀಲಿಸಿ ರೋಲನ್ ಪಿಂಟೋ ತೀರ್ಪು ನೀಡಿದ್ದರು. ಆದರೆ ಪಂದ್ಯಾಟ ಕೈತಪ್ಪುವ ಹಂತಕ್ಕೆ ಬಂದಾಗ, ಹೊರಗಿನಿಂದ ಬಂದ ಕೆಲ ಯುವಕರು ತೀರ್ಪನ್ನು ಪ್ರಶ್ನಿಸಿ ತೀರ್ಪುಗಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸೆಮಿಫೈನಲ್ ಪಂದ್ಯಾಟದ ವೇಳೆ ಬೆಟ್ಟಿಂಗ್ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಇದೇ ಕಾರಣಕ್ಕೆ ಎಲ್‌ಬಿಡಬ್ಲ್ಯು ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಿರಬಹುದೆಂದು ಹೇಳಲಾಗುತ್ತಿದೆ. ಕೆಲ ಯುವಕರು ಬೆಟ್ಟಿಂಗ್‌ನಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ತೀರ್ಪುಗಾರನ ಮೇಲೆ ದಾಳಿ ನಡೆದಿರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.