ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆ ಐದು ಸೆಂಟ್ಸ್ ಕಾಲನಿ ಬಳಿ ಯುವಕನನ್ನು ಆತನ ಪರಿಚಿತ ಸ್ನೇಹಿತರೇ ಹೊಡೆದು ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಕೊಲೆಯಾದವನನ್ನು ಪಡುಕರೆ ಸಂತೋಷ್ ಮೊಗವೀರ(30) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಯುವಕರು ಮದ್ಯದ ಪಾರ್ಟಿ ಮಾಡಿದ್ದು ಬಳಿಕ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆದಿದ್ದು ಮಾರಣಾಂತಿಕ ಹಲ್ಲೆಯಿಂದ ಸಂತೋಷ ಮೊಗವೀರ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರ ಸಹಕಾರದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಮೃತಪಟ್ಟಿದ್ದಾರೆ.

ಪಾರಂಪಳ್ಳಿ ಪಡುಕೆರೆಯ ದರ್ಶನ್(21), ಸಾಸ್ತಾನ ಪಾಂಡೇಶ್ವರದ ನೀರಾಡಿ ಜೆಡ್ಡುವಿನ ಕೌಶಿಕ್(21), ಕೋಟತಟ್ಟುವಿನ ಪಡುಕೆರೆಯ ಅಂಕಿತ್(19) ಮತ್ತು ಸುಜನ್(21) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡಿ.14ರಂದು ಸಂಜೆ, ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಬಾರ್ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್‌ಗೆ ಬಂದು ಊಟ ಮಾಡಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ದರ್ಶನ್ ಮತ್ತು ಕೌಶಿಕ್, ಅಂಕಿತ ಮತ್ತು ಸುಜನ್, ಸಂತೋಷ್ ಅವರ ಕುಟುಂಬದ ವಿಷಯ ಹಾಗೂ ಮದ್ಯಪಾನದ ವಿಚಾರದಲ್ಲಿ ವಾಗ್ವಾದಕ್ಕೆ ತುತ್ತಾದರು. ನಂತರ ನಾಲ್ಕು ಮಂದಿ ಸೇರಿ ಸಂತೋಷ್ ಮೇಲೆ ದಾಳಿ ನಡೆಸಿದರು ಎಂದು ತಿಳಿದುಬಂದಿದೆ.
ಹಲ್ಲೆಯ ಸಮಯದಲ್ಲಿ ದರ್ಶನ್ ಸಂತೋಷ್ ಅವರ ಕುತ್ತಿಗೆ ಹಿಂಬದಿಗೆ ಬಲವಾಗಿ ಹೊಡೆದಿದ್ದಾನೆ. ಕೌಶಿಕ್ ಸಹ ಕೈಯಿಂದ ಹೊಡೆದಿದ್ದಾರೆ. ರಜತ್ ಇವರ ಜಗಳವನ್ನು ನಿಲ್ಲಿಸಿದರು, ಆದರೆ ಆ ವೇಳೆ ಸಂತೋಷ್ ಸ್ಥಳದಲ್ಲಿಯೇ ಕುಸಿದು ಬಿದ್ದರು.
ಬಳಿಕ, ಸಂತೋಷನನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಪರಿಶೀಲಿಸಿ ಸಂತೋಷ್ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಘಟನಾ ಸ್ಥಳಕ್ಕೆ ಬ್ರಹ್ಮಾವರ ಹಾಗೂ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.