ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಪ್ರಭಾಕರ ಭಟ್‌ಗೆ ಜಾಮೀನು

ಪುತ್ತೂರು: ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೆಸ್ಸೆಸ್‌ ಮುಖಂಡ ಪ್ರಭಾಕರ್ ಭಟ್‌ಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

ಪುತ್ತೂರಿನ ಉಪ್ಪಳಿಗೆಯಲ್ಲಿ ಅಕ್ಟೋಬರ್ 20 ರಂದು ನಡೆದಿದ್ದ ದೀಪಾವಳಿ ಉತ್ಸವದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಪ್ರಭಾಕರ್‌ ಭಟ್‌ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಫ್ಐಆರ್ ದಾಖಲಿಸಿದ ಪೊಲೀಸರಿಗೆ ಬಂಧನ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ನಿರೀಕ್ಷಣಾ ಜಾಮೀನು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯನ್ನು ಡಿ.5 ರಂದು ಪೂರ್ಣಗೊಳಿಸಿದ್ದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸರ್ಕಾರಿ ಅಭಿಯೋಜಕಿ ಜಯಂತಿ ಕೆ. ಭಟ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಆಕ್ಷೇಪವನ್ನು ಪರಿಗಣಿಸದ ನ್ಯಾಯಾಲಯ ಜಾಮೀನು ನೀಡಿದೆ. ಪ್ರಭಾಕರ್ ಭಟ್ ಪರ ವಕೀಲ ಕೆ.ಜೆ ಮಹೇಶ್ ವಾದ ಮಂಡಿಸಿದ್ದರು.

error: Content is protected !!