ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಹಾಗೂ ದ್ವೇಷ ಭಾವ ಉಂಟುಮಾಡುವ ಪೋಸ್ಟ್ ಹಾಕಿದ್ದ 2024ರ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್(56) ಬಂಧಿತ ಆರೋಪಿ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎವ್ಜಿನ್ ಜಾನ್ ಡಿಸೋಜ(57) ನನ್ನು ದಿನಾಂಕ 11-08-2024ರಂದು ಬಂಧಿಸಲಾಗಿದೆ.
2024ರ ಫೆಬ್ರವರಿಯಲ್ಲಿ ಈ ಘಟನೆಯ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಅ.ಕ್ರ. 29/2024ರಲ್ಲಿ ಐಪಿಸಿ 153(ಎ), 504, 507, 509 ಹಾಗೂ ಐಟಿ ಕಾಯ್ದೆ 66(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಸಮಯದಲ್ಲಿ ಆರೋಪಿಯು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಕಾರಣ ಬಂಧನ ಸಾಧ್ಯವಾಗಿರಲಿಲ್ಲ.
ಮುಂಬಯಿ ಚಾರ್ಕೋಪ್ ಮೂಲದ ಫೆಲಿಕ್ಸ್ ಮಥಾಯಿಸ್ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ (LOC) ಹೊರಡಿಸಲಾಗಿತ್ತು. ನಂತರ ವಿದೇಶದಿಂದ ಮುಂಬಯಿ ಸಹರಾ ವಿಮಾನ ನಿಲ್ದಾಣಕ್ಕೆ ಬಂದಾಗ ಇಮಿಗ್ರೇಶನ್ ಅಧಿಕಾರಿಗಳು ಅವನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರನ್ವಯ ಮಂಗಳೂರು ಪೊಲೀಸರು ಡಿಸೆಂಬರ್ 05ರಂದು ಶುಕ್ರವಾರ ದಸ್ತಗಿರಿ ಮಾಡಿ ಮಂಗಳೂರಿಗೆ ಕರೆತಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೇ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದೆ.