ನವದೆಹಲಿ: ಭಾರತದಲ್ಲಿ ತಯಾರಾಗುವ ಮತ್ತು ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ‘ಸಂಚಾರ್ ಸಾಥಿʼ ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಅಳವಡಿಕೆ ಮಾಡಲು ಕೇಂದ್ರ ಸರ್ಕಾರ ನೀಡಿದ ಆದೇಶ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೈಬರ್ ವಂಚನೆ ತಡೆಗಟ್ಟುವುದು ಮತ್ತು ಕಳೆದುಹೋದ ಫೋನ್‌ಗಳನ್ನು ಮರುಪಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರವು ಹೇಳಿದ್ದರೂ, ವಿರೋಧ ಪಕ್ಷಗಳು ಇದನ್ನು ರಾಜ್ಯ ಕಣ್ಗಾವಲು ವ್ಯವಸ್ಥೆಗೆ ದಾರಿ ತೆರೆಯುವ ಹೆಜ್ಜೆ ಎಂದು ಆರೋಪಿಸುತ್ತಿವೆ.
ಕೇಂದ್ರದ ಡಿಜಿಟಲ್ ಸುರಕ್ಷತಾ ಉಪಕ್ರಮವಾದ ʻಸಂಚಾರ್ ಸಾಥಿʼ, ʻಚಕ್ಷು ಪ್ಲಾಟ್‌ಫಾರ್ಮ್ʼ ಮೂಲಕ ಶಂಕಿತ ಸೈಬರ್ ವಂಚನೆ, ಫಿಶಿಂಗ್ ಲಿಂಕ್‌ಗಳು, ಟೆಕ್ನಿಕಲ್ ಕ್ಲೋನಿಂಗ್ ಪ್ರಯತ್ನಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಗುವ ಮಾಲ್‌ವೇರ್‌ಗಳನ್ನು ವರದಿ ಮಾಡುವ ಸೌಲಭ್ಯ ಒದಗಿಸುತ್ತದೆ. ಈ ಪ್ಲಾಟ್‌ಫಾರ್ಮ್ ಮೂಲಕ ಈಗಾಗಲೇ 42 ಲಕ್ಷ ಕದ್ದ ಫೋನ್‌ಗಳನ್ನು ಸ್ಥಗಿತಗೊಳಿಸಲಾಗಿದ್ದು, 7 ಲಕ್ಷಕ್ಕೂ ಹೆಚ್ಚು ಫೋನ್‌ಗಳನ್ನು ಮರುಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಅಪ್ಲಿಕೇಶನ್ ಆಂಡ್ರಾಯ್ಡ್‌ನಲ್ಲಿ 1 ಕೋಟಿಗೂ ಹೆಚ್ಚು ಮತ್ತು iOS ನಲ್ಲಿ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.

ದೂರಸಂಪರ್ಕ ಇಲಾಖೆ ನವೆಂಬರ್ 28ರಿಂದ 90 ದಿನಗಳೊಳಗಾಗಿ ಭಾರತದಲ್ಲಿ ತಯಾರಿಸಲ್ಪಡುವ ಮತ್ತು ಆಮದುಗೊಳ್ಳುವ ಎಲ್ಲಾ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಪೂರ್ವಸ್ಥಾಪನೆ ಮಾಡಿರುವುದನ್ನು ಖಚಿತಪಡಿಸಬೇಕೆಂದು ಫೋನ್ ತಯಾರಕರಿಗೆ ಸೂಚಿಸಿದೆ. ಈಗಾಗಲೇ ನಿರ್ಮಿತ ಮೊಬೈಲ್‌ಗಳಿಗೆ, ಸಾಫ್ಟ್‌ವೇರ್ ನವೀಕರಣಗಳ ಮೂಲಕ ಅಪ್ಲಿಕೇಶನ್ ಅಳವಡಿಸುವಂತೆ ಹೇಳಲಾಗಿದೆ. ಅಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಅವಕಾಶ ಇರಬಾರದು ಹಾಗೂ ಮೊದಲ ಬಳಕೆ ಸಮಯದಲ್ಲೇ ಬಳಸುವವರಿಗೆ ಅದು ಗೋಚರಪಡಬೇಕು ಎಂಬ ನಿರ್ದೇಷವೂ ನೀಡಲಾಗಿದೆ. ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ಆದೇಶಕ್ಕೆ ವಿರೋಧ ಪಕ್ಷಗಳು ತೀವ್ರ ಪ್ರತಿಕ್ರಿಯೆ ನೀಡಿವೆ. ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಈ ಕ್ರಮವನ್ನು “ಅಸಂವಿಧಾನಿಕ”, ಎಂದು ಟೀಕಿಸಿದ್ದಾರೆ. ವೈಯಕ್ತಿಕ ಜೀವನ ಮತ್ತು ಗೌಪ್ಯತೆ ನಮ್ಮ ಸಂವಿಧಾನದ ಮೂಲಭೂತ ಹಕ್ಕು. ಅನ್‌ಇನ್‌ಸ್ಟಾಲ್ ಮಾಡಲಾಗದ ಸರ್ಕಾರಿ ಅಪ್ಲಿಕೇಶನ್ ಪ್ರತಿಯೊಬ್ಬ ನಾಗರಿಕನ ಮೇಲ್ವಿಚಾರಣೆಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಶಿವಸೇನೆ (UBT) ಸಂಸದ ಪ್ರಿಯಾಂಕಾ ಚತುರ್ವೇದಿ ಕೂಡ ಈ ಕ್ರಮವನ್ನು “ಮತ್ತೊಂದು BIG BOSS ಕಣ್ಗಾವಲು ಪ್ರಯೋಗ” ಎಂದು ಟೀಕಿಸಿ, “ವೈಯಕ್ತಿಕ ಫೋನ್‌ಗಳಲ್ಲಿ ಅನಿವಾರ್ಯ ಪ್ರವೇಶಕ್ಕೆ ಸರ್ಕಾರ ಯತ್ನಿಸುತ್ತಿದೆ. ಜನರಿಂದ ಬಲವಾದ ವಿರೋಧ ಎದುರಾಗುವುದು ಖಚಿತ” ಎಂದು ಹೇಳಿದರು.
ರಾಯಿಟರ್ಸ್ ವರದಿಯ ಪ್ರಕಾರ, ಈ ಆದೇಶ ಹೊರಡಿಸುವ ಮೊದಲು ಕೇಂದ್ರವು ಫೋನ್ ತಯಾರಕರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಗೌಪ್ಯತೆ ಸಂಬಂಧಿತ ಕಾರಣಗಳಿಂದ ಹಿಂದೆಯೇ ಇಂತಹ ಪೂರ್ವಸ್ಥಾಪಿತ ಅಪ್ಲಿಕೇಶನ್‌ಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಆಪಲ್ ಸೇರಿದಂತೆ ಯಾವುದೇ ಪ್ರಮುಖ ಕಂಪನಿಗಳು ಈ ಕುರಿತು ಪ್ರತಿಕ್ರಿಯಿಸಿಲ್ಲ.
