ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಸಂಕಷ್ಟಗಳು ತೀವ್ರಗೊಂಡಿದ್ದು, ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿದೆ. ಹಲವಾರು ವಿಭಾಗಗಳು ಮುಚ್ಚುವ ಹಂತಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾನಿಲಯದ ಈ ಹಿನ್ನಡೆಗೆ ಸರ್ಕಾರದ ನಿರ್ಲಕ್ಷ್ಯವೇ ಮುಖ್ಯ ಕಾರಣವೆಂದೂ ಅವರು ಆರೋಪಿಸಿದರು.

ಕೆಂಪುಕಲ್ಲು ಹಾಗೂ ಮರಳು ಕೊರತೆಯಿಂದ ಕೂಲಿ ಕಾರ್ಮಿಕರ ಆದಾಯ ಕಡಿಮೆಯಾಗಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸಲು ಅವರಿಗೆ ಆಗುತ್ತಿಲ್ಲ. ಅದರ ಪರಿಣಾಮವೂ ದಾಖಲೆ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ಇಚ್ಛಾಶಕ್ತಿ ಕೊರತೆಯಿದ್ದು, ದುರಾಡಳಿತದಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸದಾಶಿವ ಟೀಕಿಸಿದರು. “ಜನರ ಸಮಸ್ಯೆಗಿಂತ ಹೈಕಮಾಂಡ್ ಮೆಚ್ಚಿಸುವುದರ ಕಡೆ ಹೆಚ್ಚು ಗಮನ ಹರಿಸುತ್ತಿರುವ ಸರ್ಕಾರ ಈ ಸ್ಥಿತಿಗೆ ಕಾರಣ” ಎಂದು ಅವರು ವಿಮರ್ಶಿಸಿದರು.
ದೇವೇಗೌಡ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ರಾಜ್ಯದ ಆಡಳಿತಕ್ಕೆ ಸ್ಪಷ್ಟತೆ ಎಂದು ಅವರು ನೆನಪಿಸಿದರು.ಕುಮಾರಸ್ವಾಮಿ ಗ್ರಾಮೀಣ ಸಮಸ್ಯೆಗಳನ್ನು ಅರಿಯಲು ಗ್ರಾಮದರ್ಶನ ಮತ್ತು ಜನತಾದರ್ಶನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಗ್ರಾಮೀಣ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಕೆಪಿಎಸ್ ಯೋಜನೆ ಜಾರಿಗೆ ಬಂದು ಹಲವು ಕುಟುಂಬಗಳಿಗೆ ನೆರವಾದುದಾಗಿ ಹೇಳಿದರು.

ಜಿಲ್ಲಾಡಳಿತವು ಸಣ್ಣ ಸಮಸ್ಯೆಗಳನ್ನೂ ಬಗೆಹರಿಸಲು ವಿಫಲವಾಗುತ್ತಿದೆ ಎಂದು ಸದಾಶಿವ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಶಿಷ್ಟಾಚಾರ ಪಾಲಿಸದೆ, ನಾಗರಿಕರು ದೂರವಾಣಿ ಮೂಲಕ ಸಂಪರ್ಕಿಸಿದರೂ ‘ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ’ ಎಂಬ ಉತ್ತರ ದೊರೆಯುತ್ತಿದೆ ಎಂದು ಹೇಳಿದರು. ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ಜನಪ್ರತಿನಿಧಿಗಳ ಆಡಳಿತವೇ ಕಾಣಿಸುತ್ತಿಲ್ಲವೆಂಬದು ಅಭಿಪ್ರಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಹಮ್ಮದ್ ಕುಂಞಿ, ವಸಂತ ಪೂಜಾರಿ, ಹೈದರ್ ಪರ್ತಿಪ್ಪಾಡಿ, ಪ್ರವೀಣ್‌ಚಂದ್ರ ಜೈನ್, ಇಕ್ಬಾಲ್ ಮೂಲ್ಕಿ, ಅಕ್ಷಿತ್ ಸುವರ್ಣ, ಕನಕದಾಸ, ವಿನ್ಸೆಂಟ್ ಪಿರೇರಾ, ರಿತಿಶ್ ಕರ್ಕೇರ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.