ಕನ್ನಡದ ಬಹುನಿರೀಕ್ಷಿತ ಚಲನಚಿತ್ರ “ವಾದಿರಾಜ ವಾಲಗ ಮಂಡಳಿ”ಗೆ ಉರ್ವಾ ಮಾರಿಯಮ್ಮ ಸಾನಿಧ್ಯದಲ್ಲಿ ಮುಹೂರ್ತ

ಮಂಗಳೂರು: ಕನ್ನಡದ ಬಹುನಿರೀಕ್ಷಿತ “ವಾದಿರಾಜ ವಾಲಗ ಮಂಡಳಿ” ಚಲನಚಿತ್ರಕ್ಕೆ ಮಂಗಳೂರಿನ ಉರ್ವಾ ಮಾರಿಯಮ್ಮನ ಸಾನಿಧ್ಯದಲ್ಲಿ ಶುಕ್ರವಾರ ಮುಹೂರ್ತ ನಡೆಯಿತು. ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಅವರ ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುವ ಈ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ನಡೆದು, ಚಿತ್ರ ಜನಮೆಚ್ಚುಗೆ ಗಳಿಸಲಿ ಎಂಬ ನಿಟ್ಟಿನಲ್ಲಿ ಮಾರಿಯಮ್ಮ ದೇವಿಯ ಸಮ್ಮುಖದಲ್ಲಿ ವಿಶೇಷವಾಗಿ ಪ್ರಾರ್ಥಿಸಲಾಯಿತು.

 

ಚಲನಚಿತ್ರದ ಸ್ಕ್ರಿಪ್ಟ್‌ ಅನ್ನು ದೇವಿಯ ಚರಣದಲ್ಲಿ ಇಟ್ಟು ಪೂಜೆ ಸಲ್ಲಿಸಿದ ಬಳಿಕ, ಅರ್ಚಕರು ಪ್ರಾರ್ಥನೆ ಸಲ್ಲಿಸಿದರು. ದೇಗುಲದ ಮುಂಭಾಗದಲ್ಲಿ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಅವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಶೂಟಿಂಗ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ನಿರ್ಮಾಪಕ ಡಾ.ಎಂ.ಎನ್.ರಾಜೇಂದ್ರ ಕುಮಾರ್‌, ʻವಾದಿರಾಜ ವಾಲಗ ಮಂಡಳಿʼ ಕನ್ನಡ ಚಲನಚಿತ್ರಕ್ಕೆ ಊರ್ವಾ ಮಾರಿಯಮ್ಮ ದೇವಸ್ಥಾನದಲ್ಲಿ ಮಹೂರ್ತವನ್ನು ಮಾಡಿದ್ದೇವೆ. ಕಲಾವಿದರಿಗೆ ವಿಶೇಷವಾದ ಗೌರವ, ಅವಕಾಶವನ್ನು ಕೊಡಬೇಕು ಎಂಬ ದೃಷ್ಟಿಕೋನದಿಂದ ಕನ್ನಡ ಚಲನಚಿತ್ರವನ್ನು ನಾವು ಪ್ರಾರಂಭ ಮಾಡಿದ್ದೇವೆ. ಇದು ಸಂಪೂರ್ಣವಾಗಿ ಹಾಸ್ಯಭರಿತ ಕೌಟುಂಬಿಕ ಚಿತ್ರವಾಗಿದೆ. ಮನುಷ್ಯನ ದೈನಂದಿನ ಜೀವನದಲ್ಲಿ ಚಿಂತೆ ಇತ್ಯಾದಿ ಇರುವಾಗ ಹಾಸ್ಯ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಈ ಆಶಯದೊಂದಿಗೆ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಯಶಸ್ವಿಯಾದ ಬಳಿಕ ಕನ್ನಡದ ಹಲವು ಕಲಾವಿದರಿಗೆ ಅವಕಾಶ ಕೊಡುವ ಉದ್ದೇಶವಿದೆ ಎಂದರು.

ಚಿತ್ರ ನಿರ್ದೇಶಕ ಶಶಿರಾಜ್‌ ರಾವ್ ಕಾವೂರು ಮಾತನಾಡಿ, ʻಕನ್ನಡ ಚಿತ್ರ ಮಾಡ್ಬೇಕು ಎನ್ನುವುದು ನನ್ನ ಬಹಳ ವರ್ಷದ ಕನಸು. ಹಲವಾರು ಸಿನಿಮಾಗಳಿಗೆ ಪದ್ಯ ಬರೆದ ಅನುಭವ ಇತ್ತು. ಹಲವು ತುಳು ಸಿನಿಮಾಗಳಿಗೆ ಸಂಭಾಷಣೆ, ಸಹ ನಿರ್ದೇಶನ ಮಾಡಿದ ಅನುಭವ ಇತ್ತು. ಹಾಗಾಗಿ ಈ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದೇನೆ. ಇದನ್ನು ನನ್ನ ಕನ್ನಡದ ಮೊದಲ ಸಿನಿಮಾ. ಕನ್ನಡಿಗರು ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ʻವಾದಿರಾಜ ವಾಲಗ ಮಂಡಳಿʼಗೆ ಬಹಳ ಮುಂಚೆಯೇ ಕಥೆ ಬರೆದಿದ್ದೆ. ಈಗ ಅದಕ್ಕೆ ತೆರೆಗೆ ಬರಲು ಮಹೂರ್ತ ಬಂದಿದೆ. ಎಂಎನ್‌ಆರ್‌ ಪ್ರೊಡಕ್ಷನ್‌ನಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆʼ ಎಂದರು.

‌ಚಿತ್ರ ನಿರ್ಮಾಪಕ ಪ್ರಕಾಶ್‌ ಪಾಂಡೇಶ್ವರ್‌, ಬೆಳಪು ದೇವಿಪ್ರಸಾದ್‌ ಶೆಟ್ಟಿ, ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಅಥರ್ವ ಪ್ರಕಾಶ್, ಜಯಪ್ರಕಾಶ್ ತುಂಬೆ, ಚೇತನ್ ರೈ ಮಾಣಿ, ವೇನ್ಯ ಚೇತನ್ ರೈ, ರಂಜನ್ ಬೋಳೂರು, ಪುಷ್ಪರಾಜ್ ಬೊಳ್ಳಾರ್, ಎಸ್ ಚಂದ್ರಶೇಖರನ್. ನಟ ನವೀನ್‌ ಡಿ. ಪಡೀಲ್‌, ರಂಗಭೂಮಿ ಕಲಾವಿದ ನಾಟಕಕಾರ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಚಿತ್ರ ಕಲಾವಿದರು ಸಹಿತ ಹಲವರು ಉಪಸ್ಥಿತರಿದ್ದರು.

ಚಿತ್ರದ ಬಗ್ಗೆ
ಎಂಎನ್‌ಆರ್‌ ಪ್ರೊಡಕ್ಷನ್‌ನ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌ ನಿರ್ಮಾಣದಲ್ಲಿ ಮೂಡಿಬರುವ ವಾದಿರಾಜ ವಾಲಗ ಮಂಡಳಿ ಚಿತ್ರಕ್ಕೆ ಕಥೆ. ಸಂಭಾಷಣೆ, ನಿರ್ದೇಶನವನ್ನು ಶಶಿರಾಜ್‌ ಕಾವೂರ್‌ ಮಾಡಿದ್ದಾರೆ.. ಸಿನೆಮಾದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತುಮಿನಾಡು. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಕ್ಯೂರ್. ಮೈಮ್ ರಾಮದಾಸ್, ಶೋಭರಾಜ್ ಪಾವೂರು, ತನ್ವಿ ರಾವ್. ವೇನ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಹಲವು ಹಿಟ್ ಕನ್ನಡ, ತಮಿಳು ಸಿನೆಮಾಗಳ ಛಾಯಾಚಿತ್ರಗಾರ ಎಸ್. ಚಂದ್ರಶೇಖರನ್, ಕ್ಯಾಮೆರಾದ ಹಿಂದೆ ತಮ್ಮ ಕೈಚಳಕ ತೋರಿಸಲಿದ್ದಾರೆ.. ಮಣಿಕಾಂತ ಕದ್ರಿಯವವರ ಸಂಗೀತವಿದೆ. ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ನಟ ಸಂತೋಷ್ ಶೆಟ್ಟಿ ಸಹಕರಿಸಲಿದ್ದಾರೆ.

error: Content is protected !!