ಮಂಗಳೂರು: ನಗರಾಭಿವೃದ್ಧಿ, ಸಾರ್ವಜನಿಕ ಸೌಕರ್ಯಗಳು ಮತ್ತು ಆಡಳಿತದ ವೈಫಲ್ಯಗಳ ಬಗ್ಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಗುರುವಾರ ಮಂಗಳೂರಿನ ಅಟಲ್ ಸೇವಾಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಪಾಲಿಕೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ.

ನಗರಕ್ಕೆ ನೀರು ಪೂರೈಕೆ ಮಾಡುವ ಮುಖ್ಯ ಕೊಳವೆ ಒಡೆದು ಮೂರ್ನಾಲ್ಕು ದಿನ ಕಳೆದರೂ ಪರ್ಯಾಯ ವ್ಯವಸ್ಥೆ ಮಾಡದಿರುವುದು ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ. “ಲಕ್ಷಾಂತರ ಜನರು ನೀರಿಲ್ಲದೆ ಪರದಾಡುತ್ತಿದ್ದರೂ ಪಾಲಿಕೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕೂತಿದೆ,” ಎಂದು ಅವರು ಹೇಳಿದರು.
ಮಂಗಳೂರು ಆಯುಷ್ ಇಲಾಖೆಯ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿರುವುದು ಆತಂಕಕಾರಿ ಎಂದ ಕಾಮತ್, “ಅಧಿಕಾರಿಗಳು ಅವಧಿ ಮೀರಿದ ಔಷಧಿಗಳನ್ನು ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಆಟವಾಡಿದ್ದಾರೆ. ಸುಳಿವು ಸಿಕ್ಕ ಕೂಡಲೇ ನಾನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದೇನೆ,” ಎಂದು ವಿವರಿಸಿದರು. ಲೋಕಾಯುಕ್ತ ದಾಳಿಯಲ್ಲಿ ದಾಖಲೆಗಳು ಸಿಕ್ಕಿರುವುದು ಆರೋಪಕ್ಕೆ ಪೂರಕವೆಂದೂ ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರ ಬಗ್ಗೆ ನೀಡಿದ “ಕೀಳುಮಟ್ಟದ ಹೇಳಿಕೆ”ಯನ್ನು ಅವರು ತೀವ್ರವಾಗಿ ಖಂಡಿಸಿದರು. “ಕರಾವಳಿಯ ಹೆಗ್ಗಳಿಕೆಯಾದ ಯಕ್ಷಗಾನವನ್ನು ಅವಮಾನಿಸುವುದು ಹಿಂದೂ ಸಮಾಜದ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಸರ್ಕಾರ ತಕ್ಷಣ ಬಿಳಿಮಲೆಯನ್ನು ಪದವಿಯಿಂದ ತೆಗೆಯಬೇಕು,” ಎಂದು ಆಗ್ರಹಿಸಿದರು.
ಜನವರಿಯಿಂದ ಕದ್ರಿ ಪಾರ್ಕ್ ರಸ್ತೆಯಲ್ಲಿ ವಾಹನಗಳಿಗೆ ಟೋಲ್ ವಿಧಿಸುವ ಯೋಚನೆ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಎಂದು ಕಾಮತ್ ವಾದಿಸಿದರು. “ವರ್ಷಗಳಿಂದ ಪಾರ್ಕ್‌ಗೆ ಬರುತ್ತಿರುವ ಮಹಿಳೆ, ಹಿರಿಯರು, ಮಕ್ಕಳು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಲಿದೆ. ಇಂತಹ ಅನ್ಯಾಯಕರ ಕ್ರಮವನ್ನು ಸರ್ಕಾರ ಕೈಬಿಡಬೇಕು,” ಎಂದು ಹೇಳಿದರು.
ನಗರದಲ್ಲಿ ಪರ್ಯಾಯ ವ್ಯವಸ್ಥೆ ನೀಡದೇ ಏಕಾಂಕ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗಕ್ಕೆ ನೇರ ಹೊಡೆತ ಎಂದು ಅವರು ತಿಳಿಸಿದ್ದಾರೆ.

ನಗರದ ಜೈಲ್ ಜಾಮರ್ ಸಮಸ್ಯೆಗೆ ಜನರಿಂದ ಹಲವು ದೂರುಗಳು ಬಂದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಈಗ ಹೈಕೋರ್ಟ್ ಸ್ವತಃ ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿದೆ ಎಂದು ಅವರು ಮಾಹಿತಿ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಪಡೆದುಕೊಳ್ಳುವ ಕುರಿತಾಗಿ ಜನರು ಅನುಭವಿಸುತ್ತಿರುವ ತೊಂದರೆ ಇನ್ನೂ ಪರಿಹಾರವಾಗಿಲ್ಲ. “ಸರ್ವರ್ ಸಮಸ್ಯೆ ತಿಂಗಳುಗಳಿಂದ ಮುಂದುವರಿದಿದ್ದು, ಜನರ ತಾಳ್ಮೆ ಪರೀಕ್ಷಿಸುವಂತಾಗಿದೆ,” ಎಂದು ಕಾಮತ್ ಟೀಕಿಸಿದರು.
ರಸ್ತೆಗಳ ಹದಗೆಟ್ಟು ಹೊಂಡಗಳು ಹೆಚ್ಚಾದರೂ ಸರ್ಕಾರದಿಂದ ಯಾವುದೇ ಅನುದಾನ ದೊರೆಯದೇ ಅಪಘಾತಗಳ ಪ್ರಮಾಣ ಏರಿದೆ. ನಗರದಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದು, ಪಾಲಿಕೆ ಅದನ್ನು ಗಂಭೀರವಾಗಿ ಪರಿಗಣಿಸದಿರುವುದಾಗಿ ಅವರು ದೂರಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದ ಅಭಿವೃದ್ಧಿ ದೂರದ ಕನಸಾಗಿದ್ದು, “ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಹಲವು ಅನುದಾನಗಳು ಬಾಕಿ ಉಳಿದಿವೆ,” ಎಂದು ಕಾಮತ್ ಆರೋಪಿಸಿದರು. ಹಿಂದಿನ ಸರ್ಕಾರದಲ್ಲಿ ಮಂಜೂರಾದ ಕಂಕನಾಡಿ–ಪಂಪ್ ವೆಲ್ ರಸ್ತೆ ದುರಸ್ತಿ ಕಾಮಗಾರಿಗೆ ಈಗ ಅಸಂಬಂಧಿತ ಅಡ್ಡಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ದೂರಿದರು
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು ಹಾಗೂ ರಮೇಶ್ ಹೆಗ್ಡೆ ಲಲ್ಲೇಶ್ ಉಪಸ್ಥಿತರಿದ್ದರು.