ಮಂಗಳೂರು: ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಲಕ್ಕಿ ಸ್ಕೀಮ್ ಗಳ ಹಾವಳಿ ಮಿತಿಮೀರಿದ್ದು ಈಗಾಗಲೇ ಕೆಲವು ಸ್ಕೀಮ್ ಗಳು ಕೋಟ್ಯಾಂತರ ರೂಪಾಯಿ ಹಣವನ್ನು ಗ್ರಾಹಕರಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದೆ. ಇವುಗಳ ಸಾಲಿಗೆ ಬಿಎಂಆರ್ ಗ್ರೂಪ್ ಹೊಸ ಸೇರ್ಪಡೆಯಾಗಿದ್ದು ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆಗೈದಿರುವ ಘಟನೆ ಇಂದು (ನ.20) ಬೆಳಗ್ಗೆ ನಡೆದಿದೆ.

ಸ್ಥಳಕ್ಕೆ ಸುರತ್ಕಲ್ ಪೊಲೀಸರು ಆಗಮಿಸಿದ್ದಾರೆ. ಬಿಎಂಆರ್ ದಾವೂದ್ ಹಕೀಮ್ ಈ ಹಿಂದೆ ಗ್ರಾಹಕರ ಹಣ ಹಿಂತಿರುಗಿಸುವುದಾಗಿ ಹೇಳಿದ್ದ. ಆದರೆ ಇಲ್ಲಿಯವರೆಗೆ ಹಿಂತಿರುಗಿಸಿಲ್ಲ ಎನ್ನಲಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ಹಣ ಕಟ್ಟಿ ಕೈಸುಟ್ಟುಕೊಂಡಿರುವ ಗ್ರಾಹಕರು ಕಚೇರಿಗೆ ದಾಳಿ ನಡೆಸಿದ್ದಾರೆ.

ಸುರತ್ಕಲ್ ಠಾಣಾ ಪೊಲೀಸರು ಬಿಎಂಆರ್ ಮುಖ್ಯಸ್ಥನನ್ನು ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಈಗಾಗಲೇ ಹತ್ತಾರು ಲಕ್ಕಿ ಸ್ಕೀಮ್ ಗಳು ಜನರಿಗೆ ಟೋಪಿ ಹಾಕಿ ಎಸ್ಕೇಪ್ ಆಗಿದ್ದರೂ ಜನರು ಮತ್ತೆ ಈ ಸ್ಕೀಮ್ ಗಳತ್ತ ಮರುಳಾಗುತ್ತಿದ್ದಾರೆ. ಜನರನ್ನು ಮಂಗ ಮಾಡಲು ನಾನಾ ರೀತಿಯ ಆಫರ್ ನೀಡುತ್ತಿದ್ದು ಹಣ ಕಳೆದುಕೊಂಡ ಬಳಿಕ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದಾರೆ.