ಲಗೇಜ್ ಗೆ ಹಣ ಕೊಡುವಂತೆ ಕಿರಿಕ್! ಆನಂದ್ ಟ್ರಾವೆಲ್ಸ್ ಬಸ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರ ಆರೋಪ!!

ಉಡುಪಿ: ಪುಣೆಗೆ ಉಡುಪಿಯಿಂದ ಹೊರಟಿದ್ದ ಮಹಿಳಾ ಪ್ರಯಾಣಿಕರ ಜೊತೆಗೆ ಆನಂದ್ ಬಸ್ ಸಿಬ್ಬಂದಿ ಲಗೇಜ್ ಗೆ 800 ರೂ. ಕೊಡುವಂತೆ ಕಿರಿಕ್ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಇಷ್ಟೇ ಅಲ್ಲದೆ ಡ್ರೈವರ್ ಮತ್ತು ಸಿಬ್ಬಂದಿ ಇಬ್ಬರೂ ಪಾನಮತ್ತರಾಗಿದ್ದು ಈ ಕಾರಣದಿಂದ ಪ್ರಯಾಣವನ್ನೇ ಮೊಟಕುಗೊಳಿಸಿದ್ದಾಗಿ “ವಾಯ್ಸ್ ಆಫ್ ಪಬ್ಲಿಕ್” ಜೊತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:
ಉಡುಪಿಯಿಂದ ಪುಣೆಗೆ ತಮ್ಮ ಸೋದರಿಯನ್ನು ಕಳುಹಿಸಲು ಪಳ್ಳಿ ನಿವಾಸಿ ಸಂದೀಪ್ ಎಂಬವರು ಆನಂದ್ ಟ್ರಾವೆಲ್ಸ್ ಸ್ಲೀಪರ್ ಬಸ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಬಸ್ ಇಂದು ರಾತ್ರಿ 7 ಗಂಟೆಗೆ ಉಡುಪಿಗೆ ಬರಬೇಕಿದ್ದು ಒಂದು ಗಂಟೆ ತಡವಾಗಿ 8 ಗಂಟೆಗೆ ಆಗಮಿಸಿತ್ತು.
ಈ ವೇಳೆ ನಾಲ್ಕು ಸಣ್ಣ ಲಗೇಜ್ ಇರುವುದನ್ನು ಕಂಡ ಸಿಬ್ಬಂದಿ ಪ್ರವೀಣ್ ಎಂಬಾತ 800 ರೂ. ಪ್ರತ್ಯೇಕ ಕೊಡುವಂತೆ ಕಿರಿಕ್ ಮಾಡಿದ್ದು ಸಂದೀಪ್ ಮತ್ತು ಸೋದರಿ ಲಗೇಜ್ ಹಣ ಕೊಡುವುದಿಲ್ಲ ಎಂದು ಹೇಳಿದ್ದರು. ಕೊನೆಗೆ 500 ಕೊಡಲೇಬೇಕು ಎಂದು ದುಂಬಾಲು ಬಿದ್ದಿದ್ದು ಕೊಡುವುದಿಲ್ಲ ಎಂದಾಗ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾಗಿ ಆರೋಪಿಸಿದ್ದಾರೆ. ಇದರಿಂದ ನೊಂದ ಅವರು ತಮ್ಮ ಪ್ರಯಾಣ ಮೊಟಕುಗೊಳಿಸಿ ಮನೆಗೆ ವಾಪಾಸ್ ಆಗಿದ್ದಾರೆ. ಇತ್ತೀಚಿಗೆ ಹೈದರಾಬಾದ್ ಹೈವೇಯಲ್ಲಿ ಸ್ಲೀಪರ್ ಬಸ್ ಬೆಂಕಿ ಅನಾಹುತಕ್ಕೆ ತುತ್ತಾದ ಘಟನೆ ನಡೆದಿತ್ತು. ಹೀಗಿರುವಾಗ ಬಸ್ ಸಿಬ್ಬಂದಿ ಮದ್ಯ ಸೇವಿಸುವುದು, ಪ್ರಯಾಣಿಕರ ಜೊತೆಗೆ ಅಸಭ್ಯವಾಗಿ ವರ್ತಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

error: Content is protected !!