ಮಹಿಳೆಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 1.81 ಕೋ.ರೂ. ವಂಚನೆ

ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ಮಹಿಳೆಯೊಬ್ಬರಿಂದ 1,81,50,000 ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

58 ವರ್ಷದ ಪ್ರಾಯದ ದೂರುದಾರ ಮಹಿಳೆಗೆ ಅ. 24ರಂದು ಮಧ್ಯಾಹ್ನ 2.44ರ ವೇಳೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ಮುಂಬಯಿ ಕೊಲಾಬಾ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿ, ಹವಾಲಾ ವಹಿವಾಟು ಪ್ರಕರಣ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಕಮಿಷನ್ ತೆಗೆದುಕೊಂಡಿದ್ದೀರಿ. ಪ್ರಕರಣದಲ್ಲಿ ಶಂಕಿತರಾಗಿದ್ದು, ತನಿಖೆಗೆ ವೀಡಿಯೋ ಕರೆಯಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾನೆ. ಭೀತಳಾದ ಮಹಿಳೆಯು ಅಪರಿಚಿತ ಹೇಳಿದಂತೆ ಮಾಡಿದ್ದಾರೆ.

ಬಳಿಕ ಪತ್ರ ಬರೆಯಿಸಿಕೊಂಡಿದ್ದು, ಅದನ್ನು ಅವರ ವಾಟ್ಸ್ ಆಪ್ ನಂಬರಿಗೆ ಕಳುಹಿಸಿದ್ದರು. ಅನಂತರ ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತರು ಪೊಲೀಸ್ ಅಧಿಕಾರಿಗಳೆಂದು ವಾಟ್ಸ್ ಆ್ಯಪ್ ವೀಡಿಯೋ ಕರೆ ಮಾಡಿದ್ದು, ವೈಯಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ನ ವಿವರಗಳು ಹಾಗೂ ಬಾಕಿ ಮೊತ್ತವನ್ನೆಲ್ಲಾ ವಿಚಾರಿಸಿದ್ದಾರೆ. ಮರುದಿನ ಮತ್ತೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸುಂತೆ ಹಾಗೂ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದರು. ಭಯಗೊಂಡ ಮಹಿಳೆಯು ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1,81,50,000 ರೂ.ಗಳನ್ನು ಆರ್ ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಬಳಿಕ ಹಣವನ್ನು ವಾಪಸು ನೀಡದೆ ವಂಚಿಸಿದ್ದಾರೆ.

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

error: Content is protected !!