ಮಂಗಳೂರು: ಮಂಗಳೂರು (ಬಜ್ಪೆ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಾದ ನಂತರ ಪ್ರಯಾಣಿಕರು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸೆಕ್ಯೂರಿಟಿ ಸಿಬ್ಬಂದಿಗಳ ವರ್ತನೆ ಕುರಿತಾಗಿ ಗಂಭೀರ ಆರೋಪ ವ್ಯಕ್ತವಾಗಿದೆ. ಮಂಗಳೂರು(ಬಜ್ಪೆ) ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗ್ರೂಪ್ ವಹಿಸಿಕೊಂಡಿದ್ದು, ಅಲ್ಲಿ ಈಗ ಭದ್ರತೆ ಹೆಚ್ಚಳಗೊಂಡಿದೆ. ಆದರೆ ಆ ಬಳಿಕ ಪ್ರಯಾಣಿಕರಿಗೆ ಸಿಗುವ ಸೇವೆಯ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದು, ಜನರಲ್ಲಿ ಆಕ್ರೋಶವೂ ಮನೆ ಮಾಡಿದೆ. ವಿಮಾನಗಳಲ್ಲಿ ತೆರಳುವ ಪ್ರಯಾಣಿಕರ ಜೊತೆ ಬರುವ ಕುಟುಂಬಿಕರನ್ನು ಅಲ್ಲಿನ ಸೆಕ್ಯೂರಿಗಳು ನಾಯಿ ಓಡಿಸುವ ರೀತಿ ಓಡಿಸಿ ಅವಮಾನಿಸುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಅದಾನಿ ಗ್ರೂಪ್ ನಿರ್ವಹಣೆಗೆ ಬಂದ ಬಳಿಕ ಏರ್ಪೋರ್ಟ್‌ನಲ್ಲಿ ಹಲವು ಹೊಸ ನಿಯಮಗಳು ಜಾರಿಯಾಗಿದ್ದು, ಪ್ರಯಾಣಿಕರು ಮತ್ತು ಕ್ಯಾಬ್ ಚಾಲಕರು ಇಬ್ಬರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಏರ್ಪೋರ್ಟಿಗೆ ಬರುವ ಕ್ಯಾಬ್‌ಗಳಿಗೆ ಪ್ರತ್ಯೇಕವಾದ ಪಾರ್ಕಿಂಗ್ ವ್ಯವಸ್ಥೆ ಇತ್ತು. ಆದರೆ ಇದೀಗ ಏರ್ಪೋರ್ಟ್‌ನಿಂದ ಬಹುದೂರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಆದರೆ ಶುಲ್ಕ ಮಾತ್ರ ಡಬಲ್ ಆಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪ್ರಯಾಣಿಕರನ್ನು ಏರ್ಪೋರ್ಟ್‌ಗೆ ಬಿಡಲು ಕಳಿಸುವ ಕಾರ್‌ಗಳಿಗೆ ನಿಲ್ದಾಣದ ಗೇಟ್ ಬಳಿ ನಿಲ್ಲಿಸಲು ಕೇವಲ ಐದು ನಿಮಿಷವೂ ಸಮಯಾವಕಾಶವಿಲ್ಲ. ಕೊಂಚ ಜಾಸ್ತಿ ಹೊತ್ತಾದರೂ ಸೆಕ್ಯೂರಿಟಿ ಸಿಬ್ಬಂದಿ ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಮಂಗಳಾರತಿ ಎತ್ತುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಒಂದು ವೇಳೆ ಸಮಯಾವಕಾಶ ಕೊಂಚ ಹೆಚ್ಚಿದರೂ ಪಾರ್ಕಿಂಗ್ ಶುಲ್ಕ ವಿಧಿಸುತ್ತಾರೆ ಎನ್ನುವ ಆರೋಪವೂ ಕೇಳಿಬಂದಿದೆ.

ಎಮೋಷನಲ್‌ಗೆ ಬೆಲೆಯೇ ಇಲ್ಲ ಇಲ್ಲಿ!
ತಮ್ಮ ಕುಟುಂಬಿಕರನ್ನು ಕಳಿಸಲು ಅವರ ಜೊತೆ ಮನೆಯವರು, ಆಪ್ತರು, ಪ್ರಾಣ ಸ್ನೇಹಿತರು ಏರ್ಪೋರ್ಟ್‌ವರೆಗೂ ಬಂದು ಬೀಳ್ಕೊಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಯಾಕೆಂದರೆ ಬೀಳ್ಕೊಡಲು ಬರುವ ಸಹವರ್ತಿಗಳಿಗೆ ಅಲ್ಲಿರಲು ಅವಕಾಶವನ್ನೇ ಕೊಡುವುದಿಲ್ಲ. ಪಿಕ್‌ಅಪ್ ಸ್ಥಳದಲ್ಲಿ ದೊಡ್ಡ ಬ್ಯಾರಿಕೇಡ್ ಅಳವಡಿಸಿ ವಿಮಾನ ಪ್ರಯಾಣಿಕರಿಗೂ ಅವರ ಆಪ್ತರಿಗೂ ಕಾಣಿಸದಂತೆ ಅಲ್ಲಿನ ವ್ಯವಸ್ಥೆಯನ್ನು ಮಾರ್ಪಡಿಸಿದ್ದಾರೆ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ.

ಇಲ್ಲಿ ಎಮೋಷನಲ್‌ಗೆ ಬೆಲೆಯೇ ಇಲ್ಲ. ಯಾಕೆಂದರೆ ದೂರದೂರಿಗೆ ತಮ್ಮ ಸಹವರ್ತಿಗಳನ್ನು ಕಳಿಸುವಾಗ ಏನೋ ಒಂದು ಫೀಲಿಂಗ್, ಅಳು, ವಿರಹ ಹೀಗೆ ನಾನಾ ಭಾವನೆಗಳು ವ್ಯಕ್ತವಾಗುತ್ತದೆ. ಈ ವೇಳೆ ತಮ್ಮ ಪ್ರೀತಿಪಾತ್ರರು ವಿಮಾನ ಹತ್ತಿ ಟಾಟಾ ಮಾಡುವವರೆಗೆ ಏನೋ ಒಂದು ಅರ್ವಾಚೀನ ಭಾವನೆ ಬಿಕ್ಕಳಿಸುತ್ತದೆ. ಆದರೆ ಈಗ ಅದಕ್ಕೆ ಅವಕಾಶವೇ ಇಲ್ಲ. ಯಾಕೆಂದರೆ ಸಹವರ್ತಿಗಳಿಗೆ ನಿಲ್ಲಲು ಅವಕಾಶವನ್ನೇ ಕೊಡದೆ ಸಿಐಎಸ್‌ಎಫ್ ಸೆಕ್ಯೂರಿಟಿ ಮಕ್ಕಳು, ವೃದ್ಧರೆನ್ನದೆ ಕಣ್ಣೀರಿಗೂ ಬೆಲೆ ಕೊಡದೆ ನಾಯಿ ಅಟ್ಟಿಸಿದಂತೆ ಓಡಿಸುತ್ತಾರೆ ಎನ್ನುವುದು ಎಂದು ಕೆಲವರು ತಮ್ಮ ಕೆಟ್ಟ ಅನುಭವವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗೆ ಅನೇಕ ಮಂದಿ ಪ್ರಯಾಣಿಕರು ಬಜ್ಪೆ ಬಿಟ್ಟು ಕಣ್ಣೂರು ವಿಮಾನ ನಿಲ್ದಾಣಗಳ ಮೂಲಕ ತೆರಳಲು ಆರಂಭಿಸಿದ್ದಾರೆ.

ಇನ್ನು ಕ್ಯಾಬ್ ಚಾಲಕರು ಕೂಡ ಅಳಲು ತೋಡಿಕೊಂಡಿದ್ದು, ಪಾರ್ಕಿಂಗ್ ಶುಲ್ಕ ಡಬಲ್ ಮಾಡಿ ತಮ್ಮ ಹೊಟ್ಟೆಗೆ ಹೊಡೆಯುವ ಕೆಲಸ ಶುರುವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮೊದಲಾದರೆ ಏರ್ಪೋರ್ಟ್ ಬಾಗಿಲಿನವರೆಗೆ ಬರಲು ಅವಕಾಶ ಇತ್ತು. ಇದೀಗ ಆ ಅವಕಾಶ ಕಸಿದುಕೊಂಡಿದ್ದು, ಪ್ರಯಾಣಿಕರನ್ನು ಇಳಿಸಲು ಐದು ನಿಮಿಷವೂ ಸಮಯಾವಕಾಶವಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಇಲ್ಲಿನ ವಿಮಾನಯಾನ ಸೇವೆ ಕಳಪೆಯಿಂದ ಕೂಡಿದ್ದು, ಸೆಕ್ಯೂರಿಟಿ ಹೆಸರಲ್ಲಿ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಇಲ್ಲಿರುವ ಸಿಐಎಸ್‌ಎಫ್ ಸೆಕ್ಯೂರಿಟಿ ಸಿಬ್ಬಂದಿ ಕಣ್ಣಲ್ಲಿ ರಕ್ತವೇ ಇಲ್ಲದಂತೆ ವರ್ತಿಸುತ್ತಿದ್ದರು, ಜನರ ಭಾವನೆಗಳಿಗೆ ಬೆಲೆಯನ್ನೇ ಕೊಡುವುದಿಲ್ಲ. ಮುಖ್ಯವಾಗಿ ಇಲ್ಲಿನ ಸಿಬ್ಬಂದಿ ಹೊರರಾಜ್ಯದವರಾಗಿದ್ದು, ಈ ಮಣ್ಣಿನ ಸೊಗಡನ್ನೇ ತಿಳಿಯದ ವ್ಯಕ್ತಿಗಳಾಗಿದ್ದು, ಸಾರ್ವಜನಿಕರ ಜೊತೆ ಕಠಿಣವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕ್ಯಾಪ್ಟನ್ ಚೌಟರೇ ಇತ್ತ ಗಮನಿಸಿ

ಇದು ದಿನನಿತ್ಯದ ಗೋಳಾಗಿದ್ದು, ಅನೇಕ ಮಂದಿ ಇಲ್ಲಿ ಆಗಿರುವ ತಮ್ಮ ಕಹಿ ಅನುಭವ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಏರ್ಪೋರ್ಟ್‌ಗೆ ಭದ್ರತೆ ಕೊಡುವುದು ಸರಿ. ಆದರೆ ಅದರ ಹೆಸರಲ್ಲಿ ಜನರ ಮೇಲೆ ದಬ್ಬಾಳಿಕೆ ಸರಿಯಲ್ಲ, ಪ್ರಯಾಣಿಕರ ಭಾವನೆಗಳಿಗೂ ಬೆಲೆ ಕೊಟ್ಟು ಅವರನ್ನು ಸ್ವಾಗತಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರು ಈ ಬಗ್ಗೆ ಕೂಡಲೇ ಗಮನವಹಿಸಿ ಇಲ್ಲಿರುವ ಅಪಸವ್ಯಗಳನ್ನು ದೂರಗೊಳಿಸಬೇಕು, ಇಲ್ಲವಾದರೆ ಇಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು. ಸೆಕ್ಯೂರಿಟಿ ಹೆಸರಲ್ಲಿ ಪ್ರಯಾಣಿಕರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವಂತೆ ಇಲ್ಲಿನ ಉನ್ನತ ಅಧಿಕಾರಿಗಳಿಗೆ ಚೌಟರು ಎಚ್ಚರಿಕೆ ನೀಡಬೇಕು. ಒಮ್ಮೆ ಅಲ್ಲಿಗೆ ಚೌಟರು ಭೇಟಿ ಕೊಟ್ಟು, ಇಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಉನ್ನತ ಅಧಿಕಾರಿಗಳಿಗೆ, ವಿಮಾನ ಯಾನ ಸಚಿವರಿಗೆ ಮನವರಿಕೆ ಮಾಡುವ ಕೆಲಸ ಮಾಡಿ, ಬಜ್ಪೆ ಏರ್ಪೋಟನ್ನು ಜನಸ್ನೇಹಿ ಏರ್ಪೋರ್ಟ್ ಆಗಿ ಬದಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
