ಮಂಗಳೂರು: “ಆರೆಸ್ಸೆಸ್ಸಿಗರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ನಿಯಮಗಳನ್ನು ಪಾಲನೆ ಮಾಡ್ತಾ ಬಂದಿದ್ದರು. ಅವರಿಗೆ ಸರೆಂಡರ್ ಆಗಿದ್ದರು. ಇಡೀ ದೇಶ ಸ್ವಾತಂತ್ರ್ಯದ ಕಿಚ್ಚಿನಲ್ಲಿ ಹೊತ್ತಿ ಉರಿಯುತ್ತಿದ್ದಾಗ ಅರೆಸ್ಸೆಸ್ಸಿಗರು ಕಬಡ್ಡಿ ಆಡ್ತಾ ಇದ್ದರು. ಆರೆಸ್ಸೆಸ್ ಯೂನಿಫಾರ್ಮ್ ತೆಗೆಯಲು ಬ್ರಿಟಿಷರು ಹೇಳಿದಾಗ ಅದನ್ನು ತೆಗೆದು ಬ್ರಿಟಿಷರ ಕಾಲಡಿ ಇಟ್ಟವರು ಎಂತಹಾ ದೇಶಪ್ರೇಮಿಗಳು? ಯಾವುದೇ ಹೋರಾಟದಲ್ಲಿ ಆರೆಸ್ಸೆಸ್ ಪಾಲ್ಗೊಂಡ ಉದಾಹರಣೆಗಳಿಲ್ಲ. ಅವತ್ತು ಕಾನೂನು ಪಾಲನೆ ಮಾಡಿದವರು ಈಗ ಯಾಕೆ ಸರಕಾರದ ನಿಯಮಗಳನ್ನು ಪಾಲನೆ ಮಾಡ್ತಿಲ್ಲ?” ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ ಕಿಡಿಕಾರಿದರು.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, 1940ರಲ್ಲಿ ಬ್ರಿಟಿಷರು ಯಾವುದೇ ಸಂಘಟನೆಗಳು ಸಮವಸ್ತ್ರ ಬಳಕೆ, ಮಿಲಿಟರಿ ಕವಾಯತು ಮಾಡುವುದನ್ನು ನಿರ್ಬಂಧಿಸಿದ್ದು, ಆ ರೀತಿಯ ಚಟುವಟಿಕೆ ಮಾಡಲು ಲೈಸೆನ್ಸ್ ಪಡೆಯಬೇಕು ಎಂದು ಆದೇಶ ಮಾಡುತ್ತದೆ. ಅಂದಿನ ಆರ್‌ಎಸ್‌ಎಸ್ ಸರಸಂಘಚಾಲಕ ಎಂ.ಎಸ್. ಗೋಳ್ವಾಲಕರ್ ಬ್ರಿಟಿಷರ ಆದೇಶವನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಿದ್ದರು ಎಂದರು.
ಈ ಆದೇಶವನ್ನು ಆರ್‌ಎಸ್‌ಎಸ್ ಪಾಲನೆ ಮಾಡುತ್ತಿದ್ದೆಯಾ ಎಂದು ಪರೀಕ್ಷಿಸಲು ಅಂದಿನ ಬಾಂಬೆ ಸರ್ಕಾರದ ಹೋಂ ಡಿಪಾರ್ಟ್‌ಮೆಂಟ್ ಸಿಐಡಿ ವಿಭಾಗ 1942ರಲ್ಲಿ ಬಾಂಬೆ ಪ್ರಾಂತ್ಯದ 19 ಜಿಲ್ಲೆಯಲ್ಲಿನ ಶಾಖೆಗಳಿಗೆ ಭೇಟಿ ನೀಡಿ ರಹಸ್ಯ ವರದಿ ನೀಡುತ್ತದೆ. 90 ಪುಟಗಳ ದಾಖಲೆಯ ಪ್ರಕಾರ ಆರ್‌ಎಸ್‌ಎಸ್ ಬ್ರಿಟಿಷರ ಎಲ್ಲಾ ನಿಯಮಗಳಿಗೂ ಶರಣಾಗಿತ್ತು. ಬ್ರಿಟಿಷರಿಗೆ ಧಿಕ್ಕಾರ ಕೂಗಿದ್ದಾಗಲೀ, ಅವರ ವಿರುದ್ಧ ಹೋರಾಡಿರುವ ದಾಖಲೆಗಳು ಸಿಗುತ್ತಿಲ್ಲ ಎಂದರು.

ಅವತ್ತು ಕಾನೂನು ಪಾಲನೆ ಮಾಡಿದವರು ಇವತ್ಯಾಕೆ ಕಾನೂನು ಪಾಲನೆ ಮಾಡ್ತಾ ಇಲ್ಲ? ಗುರುದಕ್ಷಿಣೆಯ ಲೆಕ್ಕ ಯಾಕೆ ಕೊಡ್ತಾ ಇಲ್ಲ? ಆಸ್ಟ್ರೇಲಿಯಾ, ಯುಕೆ, ಕೆನಡ, ಇಂಗ್ಲೆಂಡ್ ಸೇರಿ ಸುಮಾರು 70 ದೇಶಗಳಲ್ಲಿ ಆರ್‌ಎಸ್‌ಎಸ್ ಸಂಘಟನೆ ಬೇರೆ ಬೇರೆ ಹೆಸರಲ್ಲಿದ್ದು, ಅಲ್ಲಿ ಸಂಘ ನೋಂದಣಿಯಾಗಿದೆ. ಆದರೆ ಭಾರತದಲ್ಲಿ ಯಾಕೆ ನೋಂದಣಿ ಮಾಡ್ತಾ ಇಲ್ಲ? ಬೇರೆಯವರಿಗೆ ದೇಶಪ್ರೇಮ ಕಲಿಸುವ ಸಂಘ, ತಾವ್ಯಾಕೆ ದೇಶದ ಕಾನೂನುನನ್ನು ಪಾಲನೆ ಮಾಡ್ತಾ ಇಲ್ಲ? ಆರೆಸ್ಸೆಸ್-ಬಿಜೆಪಿ ಎರಡೂ ಒಂದೇ ಎನ್ನುವುದು ಇದರಿಂದ ಸಾಬೀತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುಳಾ ನಾಯ್ಕ್, ಉದಯ ಆಚಾರ್, ಸತೀಶ್ ಶೆಡ್ಡಿ, ರವಿ ಪೂಜಾರಿ, ಮಿಥುನ್ ಮತ್ತಿತರರಿದ್ದರು.

