ನವದೆಹಲಿ : ಖ್ಯಾತ ಜುಜುತ್ಸು ಆಟಗಾರ್ತಿ ರೋಹಿಣಿ ಕಲಾಂ(32) ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಬ್ಯಾಂಕ್ ನೋಟ್ ಪ್ರೆಸ್ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಜುನ್ ನಗರದ ತನ್ನ ಮನೆಯಲ್ಲಿ ಸ್ಕಾರ್ಫ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. . ರೋಹಿಣಿ ಆತ್ಮಹತ್ಯೆ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದು, ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ರೋಹಿಣಿ ಕಲಾಂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದು ಭಾರಿ ಹೆಸರು ಗಳಿಸಿದ್ದರು. ಜುಜುತ್ಸು ನಂತಹ ಸಮರ ಕಲೆಗಳಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು.
ರೋಹಿಣಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ರೋಹಿಣಿ 2007 ರಲ್ಲಿ ತಮ್ಮ ಕ್ರೀಡಾ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 2015 ರಲ್ಲಿ ವೃತ್ತಿಪರವಾಗಿ ಜುಜಿಟ್ಸುನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದರು. ಹ್ಯಾಂಗ್ಝೌನಲ್ಲಿ ನಡೆದ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ವಿಶ್ವ ಕ್ರೀಡಾಕೂಟಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದರು.
ಕುಟುಂಬದ ಮೂಲಗಳ ಪ್ರಕಾರ ರೋಹಿಣಿ ಸಾಕಷ್ಟು ಒತ್ತಡದಲ್ಲಿದ್ದರು. ಯಾರೊಂದಿಗೂ ಮಾತಾಡದೆ ಒಬ್ಬಂಟಿಯಾಗಿದ್ದರು ಎನ್ನಲಾಗಿದೆ. ರೋಹಿಣಿ ಕಾಲ್ ಲಿಸ್ಟ್ ಸೇರಿದಂತೆ ಅನೇಕ ವಿಚಾರಗಳ ಪರಿಶೀಲನೆ ನಡೆಸಲಾಗುತ್ತಿದೆ.

