ಬ್ರಹ್ಮಾವರ: ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ಪಂಗನಾಮ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರದ ಕೌಶಲ್ಯ ಬಂಧಿತ ಆರೋಪಿ.
ಈಕೆ 2023ರ ನವೆಂಬರ್ ನಲ್ಲಿ ಬಾರ್ಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಿಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ಸರಿತಾ ಲೂವಿಸ್ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು ,ಗೀತಾ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬವರಿಗೆ ಒಟ್ಟು 80,72,000ರೂ. ಹಣ ನೀಡಿದ್ದರು ಎನ್ನಲಾಗಿದೆ.
ಅದೇ ರೀತಿ ಕೌಶಲ್ಯ, ಅಂಜಲಿನ್ ಡಿಸಿಲ್ವಾ ಎಂಬವರಿಗೂ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ ಸರಿತಾ ಲೂವಿಸ್ ಗೆ ತಿಳಿಸಿದ ವ್ಯಕ್ತಿಗಳ ಖಾತೆಗಳಿಗೆ 65,00,000ರೂ. ನಗದು ಹಣವನ್ನು ಪಾವತಿಸಿದ್ದರು. ಕೌಶಲ್ಯ ಇವರಿಬ್ಬರಿಗೆ ಒಟ್ಟು 4 ಕೋಟಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಹಾಗೂ ಬ್ಯಾಂಕ್ ನೌಕರ ಎಂದು ಪೋನ್‌ನಲ್ಲಿ ಮಾತನಾಡಿ ನಂಬಿಸಿ ಲೋನ್ ಕೊಡಿಸದೆ ಒಟ್ಟು 1,45,72,000ರೂ. ಹಣ ಪಡೆದು ವಂಚನೆ ಮಾಡಿರುವುದಾಗಿ ದೂರಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಬ್ರಹ್ಮಾವರ ಪೊಲೀಸರು ಆರೋಪಿ ಕೌಶಲ್ಯಳನ್ನು ಬಂಧಿಸಿದ್ದಾರೆ.

