ಬೆಂಗಳೂರು: ಕಾಂಗ್ರೆಸ್‌ನ ಒಳರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ʻಸಿಎಂ ಫೈಟ್ʼ ಶೀತಲ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದರ ರಾಜಕೀಯ ಅಲೆಗಳು ಈಗ ನವದೆಹಲಿವರೆಗೂ ತಲುಪಿವೆ. ಪಕ್ಷದ ಒಳಗಿನ ಈ ಶಕ್ತಿ ಪ್ರದರ್ಶನವು ಕೇವಲ ಕರ್ನಾಟಕದ ಸೀಮೆಗೆ ಸೀಮಿತವಾಗದೇ, ಕೇಂದ್ರವೇ ಅಖಾಡಕ್ಕಿಳಿಯುವಂತೆ ಮಾಡಿದೆ. ನವೆಂಬರ್ ಕ್ರಾಂತಿ ಊಹಿಸಲೂ ಸಾಧ್ಯವಾಗದಷ್ಟು ಹೊಸ ತಿರುವನ್ನು ಪಡೆಯುವತ್ತ ಸಾಗಿದೆ.

ಈ ಪರಿಸ್ಥಿತಿಯನ್ನು ಬಲವಾಗಿ ಉಪಯೋಗಿಸಿಕೊಳ್ಳಲು ಬಿಜೆಪಿ ಕೇಂದ್ರ ನಾಯಕತ್ವ ತೆರೆಮರೆಯಲ್ಲಿ ಚಟುವಟಿಕೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕರ್ನಾಟಕ ರಿಟರ್ನ್ ಪ್ಲಾನ್” ಎಂಬ ಬೃಹತ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವ ಮಾಹಿತಿ ದೊರೆತಿದೆ.
ಈ ಯೋಜನೆಯ ಕೀ ಪ್ಲೇಯರ್ ಆಗಿ ಮೈತ್ರಿಕೂಟದ ಪಾಲುದಾರ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನೊಳಗಿನ ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ಶಕ್ತಿ ಸಂಘರ್ಷ ಹೊಸ ಹಂತಕ್ಕೇರಿದ್ದು, ಈ ಒಳಕಾಳಗದ ಪರಿಣಾಮವಾಗಿ “ಮಧ್ಯಂತರ ಚುನಾವಣೆ” ಅಥವಾ “ನಾಯಕತ್ವ ಬದಲಾವಣೆ” ಸಾಧ್ಯತೆಗಳ ಬಗ್ಗೆ ರಾಜಕೀಯ ಪಂಡಿತರು ಊಹಾಪೋಹ ಆರಂಭಿಸಿದ್ದಾರೆ.

ಮೂಲಗಳ ಪ್ರಕಾರ, ಅಮಿತ್ ಶಾ ಈಗಾಗಲೇ ಕುಮಾರಸ್ವಾಮಿಗೆ “ಗ್ರೀನ್ ಸಿಗ್ನಲ್” ನೀಡಿದ್ದಾರೆ. ಅದನ್ವಯವಾಗಿ, ಜೆಡಿಎಸ್ ಈಗ ರಾಜ್ಯದಲ್ಲಿ ಸಕ್ರಿಯ ರಾಜಕೀಯ ಚಟುವಟಿಕೆಯನ್ನು ಪುನರಾರಂಭಿಸಿದ್ದು, ಬಿಜೆಪಿ ಜೊತೆಗಿನ ಮೈತ್ರಿಯನ್ನು ಬಲಪಡಿಸುವ ಪ್ರಯತ್ನದಲ್ಲಿ ತೊಡಗಿದೆ.
ಈ ಹಿನ್ನೆಲೆಯಲ್ಲಿ, ಮಧ್ಯಂತರ ಚುನಾವಣೆಗಳ ಸಾಧ್ಯತೆಗಳ ಕುರಿತು ಊಹಾಪೋಹಗಳು ಹೆಚ್ಚಾಗಿವೆ. ಕಾಂಗ್ರೆಸ್‌ನ ಒಳಜಗಳ ಮುಂದುವರಿದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ರಾಜ್ಯದ ರಾಜಕೀಯ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜು ಮಾಡುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ–ಡಿಕೆಶಿ ಸಂಘರ್ಷ, ಅಮಿತ್ ಶಾ–ಕುಮಾರಸ್ವಾಮಿ ಮೈತ್ರಿ ಹಾಗೂ ಮಧ್ಯಂತರ ಚುನಾವಣೆಯ ಸನ್ನಿವೇಶ — ಈ ತ್ರಿಕೋನದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕೀಯ ಹೆಚ್ಚು ಚುರುಕುಗೊಳ್ಳುವ ಸಾಧ್ಯತೆ ಇದೆ.
ನವೆಂಬರ್ ಕ್ರಾಂತಿ?
ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬೃಹತ್ ಬದಲಾವಣೆಗಳಾಗಬಹುದು ಎಂಬ ಮಾತು ಪ್ರಚಲಿತದಲ್ಲಿದೆ. ಕಾಂಗ್ರೆಸ್‌ನೊಳಗಿನ ಆಂತರಿಕ ಸಂಘರ್ಷ ಉಗ್ರವಾಗಿದರೆ, ಹೈಕಮಾಂಡ್ ನಾಯಕತ್ವ ಬದಲಾವಣೆ ಅಥವಾ ಮಧ್ಯಂತರ ಚುನಾವಣೆಗೆ ತಯಾರಿ ಕೈಗೊಳ್ಳುವ ಸಾಧ್ಯತೆ ತಳ್ಳಿ ಹಾಕಲಾಗುವುದಿಲ್ಲ.
ಕುಮಾರಸ್ವಾಮಿ ಸಿಎಂ?
ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಈಗ ಮತ್ತಷ್ಟು ಬಲಗೊಳ್ಳುತ್ತಿದ್ದು, ರಾಜ್ಯದಲ್ಲಿ ‘ರಾಜಕೀಯ ಉಲ್ಕಾಪಾತ’ಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಮಧ್ಯಂತರ ಚುನಾವಣೆ ನಡೆದರೆ, ಜೆಡಿಎಸ್‌ಗೆ ಸೀಮಿತ ಸ್ಥಾನಮಾನವಿದ್ದರೂ, ಮೈತ್ರಿ ರಾಜಕಾರಣದಲ್ಲಿ ಕುಮಾರಸ್ವಾಮಿಗೆ ಮತ್ತೆ ಮುಖ್ಯಮಂತ್ರಿಯ ಗಾದಿ ಸಿಗುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.