ಗುಂಡ್ಲುಪೇಟೆ : ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ-766ರ ಮಾದಪಟ್ಟಣ ಗೇಟ್ ಬಳಿ ಟಿಪ್ಪರ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಕೇರಳ ಮೂಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಸೇರಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು (ಅ.25) ಬೆಳಗ್ಗೆ ನಡೆದಿದೆ.

ಕೇರಳ ಮೂಲದ ಕಾರು ಚಾಲಕ ಬಷೀರ್(53) ಹಾಗೂ ನಸೀಮಾ ಬಷೀರ್(42) ರಸ್ತೆ ಅಪಘಾತದಲ್ಲಿ ಮೃತಪಟ್ಟವರು . ಮಹಮ್ಮದ್ ಷಪಿ(32), ಜಸೀರಾ(28) ಹಾಗೂ ಮೂರು ವರ್ಷದ ಮಗು ಅಜೈಮ್ ಅನಾನ್ ತೀವ್ರ ಗಾಯಾಗೊಂಡವರು.
ಗುಂಡ್ಲುಪೇಟೆ ಕಡೆಯಿಂದ ಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಲಾರಿ ಹಾಗೂ ಮೈಸೂರಿನಿಂದ ಬರುತಿದ್ದ ಕೇರಳ ಮೂಲದ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಬೇಗೂರು ಸರ್ಕಲ್ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ಸಬ್ ಇನ್ಸ್ ಪೆಕ್ಟರ್ ನವೀನ್ ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿದ್ದ ಮೃತ ಬಷೀರ್ ಹಾಗೂ ನಸೀಮಾ ಬಷೀರ್ ದೇಹವನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ತೀವ್ರವಾಗಿ ಗಾಯಗೊಂಡಿರುವ ಮೂವರನ್ನು ಅಂಬ್ಯುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟಿಪ್ಪರ್ ಲಾರಿ ರಸ್ತೆ ಬದಿಯ ಜಮೀನಿಗೆ ನುಗ್ಗಿದ್ದೆ. ಟಿಪ್ಪರ್ ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.