ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಬಸ್ ಬೆಂಕಿ ದುರಂತದ ತನಿಖೆ ಮುಂದುವರಿಯುತ್ತಿದ್ದು, ಹೊಸ ಬೆಳವಣಿಯೊಂದು ಬೆಳಕಿಗೆ ಬಂದಿದೆ. ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ವರದಿ ಪ್ರಕಾರ, ಬಸ್‌ನಲ್ಲಿದ್ದ 234 ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಗಳು ಸ್ಫೋಟಗೊಂಡಿದ್ದು, ಅದರಿಂದಲೇ ಬೆಂಕಿ ತಗುಲಿ 19 ಮಂದಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಆ 234 ಸ್ಮಾರ್ಟ್ ಫೋನ್‌ಗಳ ಒಟ್ಟು ಮೌಲ್ಯ ಸುಮಾರು ₹46 ಲಕ್ಷ. ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಅವರು ಈ ಫೋನ್‌ಗಳನ್ನು ಪಾರ್ಸೆಲ್ ರೂಪದಲ್ಲಿ ಬೆಂಗಳೂರಿನ ಇ-ಕಾಮರ್ಸ್ ಕಂಪೆನಿಗೆ ರವಾನಿಸುತ್ತಿದ್ದರು. ಆ ಕಂಪನಿ ಮೂಲಕ ಗ್ರಾಹಕರಿಗೆ ಸರಬರಾಜು ಮಾಡುವ ಉದ್ದೇಶವಿತ್ತು.
ಪ್ರತ್ಯಕ್ಷದರ್ಶಿಗಳು, “ಬೆಂಕಿ ಹೊತ್ತಿಕೊಳ್ಳುವ ಮುನ್ನ ಬಸ್ ಒಳಗೆ ಸ್ಫೋಟದ ಶಬ್ದ ಕೇಳಿಬಂದಿತ್ತು” ಎಂದು ತಿಳಿಸಿದ್ದಾರೆ.
ಆಂಧ್ರ ಅಗ್ನಿಶಾಮಕ ಸೇವಾ ಮಹಾನಿರ್ದೇಶಕ ಪಿ. ವೆಂಕಟರಾಮನ್, “ಸ್ಮಾರ್ಟ್‌ಫೋನ್ ಬ್ಯಾಟರಿಗಳ ಸ್ಫೋಟದ ಜೊತೆಗೆ ಬಸ್‌ನ ಎಸಿ ವ್ಯವಸ್ಥೆಯಲ್ಲಿದ್ದ ವಿದ್ಯುತ್ ಬ್ಯಾಟರಿಗಳೂ ಸಿಡಿದಿವೆ. ಶಾಖ ಅಷ್ಟು ತೀವ್ರವಾಗಿತ್ತು ಎಂದು ಬಸ್ ನೆಲದ ಅಲ್ಯೂಮಿನಿಯಂ ಹಾಳೆಗಳೇ ಕರಗಿದ್ದವು.” ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಅವರು, “ಬಸ್ ಮುಂಭಾಗದಲ್ಲಿ ಇಂಧನ ಸೋರಿಕೆ ಮತ್ತು ಬೈಕ್ ಸಿಲುಕಿಕೊಂಡ ಘಟನೆಗಳಿಂದ ಪ್ರಾರಂಭಿಕ ಬೆಂಕಿ ಹೊತ್ತಿಕೊಂಡಿತು. ಪೆಟ್ರೋಲ್ ಚಿಮ್ಮುವಿಕೆ, ಶಾಖ ಮತ್ತು ಕಿಡಿ ಎಲ್ಲಾ ಸೇರಿ ಬಸ್ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಯಿತು.”
ವೆಂಕಟರಾಮನ್ ಅವರ ಪ್ರಕಾರ, ಘಟನಾ ಸ್ಥಳದಲ್ಲಿ “ಅಲ್ಯೂಮಿನಿಯಂ ಹಾಳೆಗಳೊಳಗೆ ಮೂಳೆಗಳು ಕಂಡುಬಂದಿವೆ”, ಇದು ದುರಂತದ ತೀವ್ರತೆಯನ್ನು ತೋರಿಸುತ್ತದೆ.
ಅವರು ಬಸ್ ವಿನ್ಯಾಸದ ದೋಷವನ್ನೂ ಎತ್ತಿ ತೋರಿಸಿದರು. “ತೂಕ ಕಡಿಮೆ ಮಾಡುವ ಉದ್ದೇಶದಿಂದ ಕಬ್ಬಿಣದ ಬದಲು ಅಲ್ಯೂಮಿನಿಯಂ ಬಳಕೆಯಾಗಿತ್ತು. ಅದು ವೇಗ ಹೆಚ್ಚಿಸಿದರೂ ಸುರಕ್ಷತೆಯನ್ನು ಕುಗ್ಗಿಸಿತು,” ಎಂದು ಹೇಳಿದರು.
ಈ ಘಟನೆಯ ನಂತರ ಬಸ್ ನಿರ್ಮಾಣ ಕಂಪೆನಿ ಮತ್ತು ಟ್ರಾನ್ಸ್‌ಪೋರ್ಟ್ ಇಲಾಖೆಯ ವಿರುದ್ಧ ನಿರ್ಲಕ್ಷ್ಯದ ಆರೋಪಗಳು ಕೇಳಿ ಬಂದಿದ್ದು, ತನಿಖೆ ಮುಂದುವರಿದಿದೆ.

