
ಹೈದರಾಬಾದ್: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ ಬೆಂಕಿಗಾಹುತಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದ ದುರ್ಘಟನೆ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ಚಿನ್ನ ಟೆಕುರು ಗ್ರಾಮದ ಬಳಿ ಸಂಭವಿಸಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬಸ್‌ನಲ್ಲಿ ಒಟ್ಟು 42 ಮಂದಿ ಪ್ರಯಾಣಿಕರಿದ್ದು, 12 ಮಂದಿ ಎಮೆರ್ಜೆನ್ಸಿ ಎಕ್ಸಿಟ್ ವಿಂಡೋ(ತುರ್ತು ನಿರ್ಗಮನ ದ್ವಾರ) ಮೂಲಕ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಬೈಕ್‌ಗೆ ಢಿಕ್ಕಿಯಾಗುತ್ತಿದ್ದಂತೆ ಬಸ್ ಅಲ್ಲೇ ನಿಲ್ಲುತ್ತಿದ್ದರೆ ಇಂಥದೊಂದು ದುರಂತ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ?
ಆರಂಭದಲ್ಲಿ ಬಸ್ ಮೊದಲು ಬೈಕ್‌ಗೆ ಢಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ಬಸ್ ಅಲ್ಲೇ ನಿಲ್ಲುವ ಬದಲು ಮುಂದಕ್ಕೆ ಸಾಗಿದ್ದರಿಂದ ಅದರ ಅಡಿಗೆ ಬೈಕ್ ಸಿಲುಕಿಕೊಂಡಿತ್ತು. ಬೈಕ್ ವೇಗವಾಗಿ ನೆಲಕ್ಕೆ ಉಜ್ಜಿದ ಪರಿಣಾಮ ಅದರಲ್ಲಿ ಬೆಂಕಿ ಉತ್ಪತ್ತಿಯಾಗಿದ್ದು, ಅದು ಪೆಟ್ರೋಲ್‌ಗೆ ತಗುಲಿ ಇಡೀ ಬಸ್ಸನ್ನೇ ಆಹುತಿ ಪಡೆದು ಈ ದುರ್ಘಟನೆ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಬಸ್ ಪ್ರಯಾಣಿಕರು ಸುಖನಿದ್ದೆಯಲ್ಲಿದ್ದಾಗಲೇ ಈ ದುರ್ಘಟನೆ ಸಂಭವಿಸಿದ್ದು, ಏನಾಯಿತೆಂದು ಅರಿಯುವ ಹೊತ್ತಿಗೆ ಬೆಂಕಿಗೆ ಕೆನ್ನಾಲೆಗೆ ಸುಟ್ಟು ಕರಕಲಾದರು ಎಂದು ಮಾಹಿತಿ ಲಭಿಸಿದೆ. ಬಸ್‌ಗೆ ಢಿಕ್ಕಿಯಾದ ಬೈಕ್ ಸವಾರನೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಬಸ್ ಚಾಲಕ ಬದಲಿ ಚಾಕನನ್ನು ಎಬ್ಬಿಸಿ ಪ್ರಯಾಣಿಕರನ್ನು ಬಸ್ನಿಂದ ಕೆಳಗೆ ಇಳಿಸುವ ಪ್ರಯತ್ನ ಮಾಡಿದರೂ ಯಾರನ್ನೂ ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅದು ವೋಲ್ವೊ ಬಸ್ ಆಗಿರುವುದರಿಂದ ಕಿಟಕಿಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಆದರೂ ಕಿಟಕಿಯನ್ನು ಒಡೆದು ಕೆಲವು ಪ್ರಯಾಣಿಕರನ್ನು ಹೊರತರಲಾಯಿತಾದರೂ ಹಲವರು ಮಂದಿ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪೊಲೀಸರು- ಪ್ರತ್ಯಕ್ಷದಕ್ಷಿಗಳು ಹೇಳಿದ್ದೇನು?
ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಆದರೆ ಬಸ್‌ನೊಳಗಿನ ದಹನಕಾರಿ ವಸ್ತುಗಳು ಬೆಂಕಿಯನ್ನು ತೀವ್ರಗೊಳಿಸಿದವು ಎಂದು ಡಿಐಜಿ ಕೋಯಾ ಪ್ರವೀಣ್ ಹೇಳಿದ್ದಾರೆ. ಬಸ್ಸಿನ ಇಂಧನ ಟ್ಯಾಂಕ್ ತುಂಬಿದ್ದರಿಂದ ಬೆಂಕಿ ಇನ್ನಷ್ಟು ವ್ಯಾಪಿಸಿತು. ಅಪಾಯ ಸಂಭವಿಸದಂತೆ ಹಾಗೂ ತಕ್ಷಣದಲ್ಲಿ ನಿಯಂತ್ರಿಸುವಂತೆ ಬಸ್‌ನಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳು ಇರಲಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ.
ಇದುವರೆಗೆ 20 ಜನರಲ್ಲಿ 11 ಶವಗಳನ್ನು ಗುರುತಿಸಲಾಗಿದೆ, ಆದರೆ 9 ಜನರನ್ನು ಇನ್ನೂ ಗುರುತಿಸಲಾಗಿಲ್ಲ. ಬೆಂಕಿ ಹೊತ್ತಿಕೊಂಡ ನಂತರ ಬಸ್ ಬಾಗಿಲು ಜಖಂಗೊಂಡಿತು ಹಾಗಾಗಿ ತೆರೆಯಲು ಸಾಧ್ಯವಾಗಲಿಲ್ಲ ಎಂದರು. ಬೆಂಕಿ ಎಷ್ಟು ಬೇಗನೆ ಹರಡಿತೆಂದರೆ, ಹೆಚ್ಚಿನ ಪ್ರಯಾಣಿಕರು ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮೊದಲೇ ಬೆಂಕಿಯಲ್ಲಿ ಬೆಂದುಹೋದರು. ಕೆಲವರು ಸುಟ್ಟಗಾಯಗಳೊಂದಿಗೆ ಮೃತಪಟ್ಟಕೆ, ಇನ್ನು ಕೆಲವರು ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ಇದೆ.
![]()
ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು ಹೊರತೆಗೆಯಲು ಹೆಣಗಾಡಿದವು. ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ, ಆದರೆ ವಿನಾಶದ ಪ್ರಮಾಣವು ಹೆಚ್ಚಿನ ಸಂಖ್ಯೆಯ ಸಾವುನೋವುಗಳನ್ನು ಸೂಚಿಸುತ್ತದೆ. ಅಲ್ಲದೆ ಮಳೆಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ಬಾಗೇಪಲ್ಲಿಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಅಪಘಾತದಲ್ಲಿ ಕನ್ನಡಿಗರು ಇದ್ದಾರಾ ಎಂದು ಪರಿಶೀಲನೆ ಮಾಡಲಾಗುತ್ತಿದೆ. ಛತ್ತೀಸ್ಗಢದಲ್ಲಿ ಈ ಬಸ್ನ ನೋಂದಣಿಯಾಗಿದೆ ಎಂದು ಮಾಹಿತಿ ಸಿಕ್ಕಿದೆ. ದುರಂತದಲ್ಲಿ ಕರ್ನಾಟಕದವರು ಯಾರಾದರೂ ಇದ್ದಾರೆಯೇ ಎಂದು ಪತ್ತೆ ಹಚ್ಚಲು ಕೂಡಲೇ ಆರ್‌ಟಿಒ ಅಧಿಕಾರಿಗಳನ್ನು ಕರ್ನೂಲ್ ಬಳಿಯ ಬಾಗೇಪಲ್ಲಿಗೆ ಕಳುಹಿಸಲಾಗಿದೆ ಎಂದರು.
ಸಿಎಂ ಡಿಸಿಎಂ ಸಂತಾಪ
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, “ಕರ್ನೂಲ್ ಬಳಿ ನಡೆದ ಬಸ್ ಅಗ್ನಿ ದುರಂತದ ಸುದ್ದಿ ಕೇಳಿ ತೀವ್ರ ಆಘಾತ ಮತ್ತು ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಆಂಧ್ರ ಪ್ರದೇಶದ ಕರ್ನೂಲ್‌ನ ಬೆಂಗಳೂರು – ಹೈದರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಬಸ್‌ಗೆ ಬೆಂಕಿ ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ಅತೀವ ದುಃಖವಾಯಿತು. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ,” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯಿಂದ ಪರಿಹಾರ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಪ್ರಾಣಹಾನಿಯಾಗಿರುವುದು ಅತ್ಯಂತ ದುಃಖಕರ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ” ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನು ಘೋಷಿಸಲಾಗಿದೆ.

ನೆನಪಿಸಿದ ರಾಜಸ್ಥಾನ ಅವಘಡ
ರಾಜಸ್ಥಾನದಲ್ಲಿ ಭೀಕರ ಬಸ್ ಬೆಂಕಿ ಅವಘಡ ಸಂಭವಿಸಿ, ಮೂವರು ಮಕ್ಕಳು ಸೇರಿದಂತೆ 22 ಜನರು ಕಳೆದ ವಾರ ಮೃತಪಟ್ಟಿದ್ದರು. ಅಕ್ಟೋಬರ್ 14 ರಂದು ಥೈಯಾತ್ ಗ್ರಾಮದ ಬಳಿ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ವಾಹನದ ಹವಾನಿಯಂತ್ರಣ ವ್ಯವಸ್ಥೆಯಲ್ಲಿನ ಶಾರ್ಟ್ ಸರ್ಕ್ಯೂಟ್ ಅನಿಲ ಸೋರಿಕೆಗೆ ಕಾರಣವಾಗಿದ್ದು, ಬೆಂಕಿಗೆ ಕಾರಣವಾಗಿತ್ತು.