ಬೋಲ್ಪುರ್ (ಪಶ್ಚಿಮ ಬಂಗಾಳ): ಬಿರ್ಭುಮ್ ಜಿಲ್ಲೆಯ ಬೋಲ್ಪುರ್ ಸಮೀಪದ ಲೌದಾಹಾ ಗ್ರಾಮದಲ್ಲಿ ಎರಡನೇ ಮಹಾಯುದ್ಧದ ಕಾಲಕ್ಕೆ ಸೇರಿದ ಅಂದರೆ ಸುಮಾರು 80 ವರ್ಷಗಳ ಹಿಂದಿನ ಜೀವಂತ ಬಾಂಬ್ ಪತ್ತೆಯಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟಾಯಿತು. ಗುರುದೇವ್ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯದ ಬಳಿಯೇ ಈ ನಿಗೂಢ ಘಟನೆ ನಡೆದಿದೆ. ಅಂದಹಾಗೆ ಈ ಬಾಂಬ್ ಇಲ್ಲಿಗೆ ಹೇಗೆ ಬಂದಿತು ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಗ್ರಾಮದ ಅಜಯ್ ನದಿಯ ದಡದಲ್ಲಿ ಸಿಲಿಂಡರ್ ತರಹದ ಲೋಹದ ವಸ್ತುವನ್ನು ಸ್ಥಳೀಯ ಮೀನುಗಾರರು ಸುಮಾರು ಒಂದು ತಿಂಗಳ ಹಿಂದೆಯೇ ಕಂಡಿದ್ದರು. ಬಾಂಬ್ ಎಂದು ತಿಳಿಯದಿದ್ದ ಜನರು ಮೊದಲಿಗೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದಿದ್ದರೂ, ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸುತ್ತಲೇ ಎದುರಲ್ಲಿಯೇ ಜೀವಂತ ಬಾಂಬ್ ಕಂಡು ಔಹಾರಿದ್ದಾರೆ. ಪೊಲೀಸರು ತಕ್ಷಣ ಸ್ಥಳವನ್ನು ಸುತ್ತುವರೆದು ಸಾರ್ವಜನಿಕರನ್ನು ಸ್ಥಳಕ್ಕೆ ಬಾರದಂತೆ ದೂರ ಇರಿಸಿದರು. ನಂತರ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಪಾಸಣೆ ನಡೆಸಿದ ನಂತರ ಬುಧವಾರ ಸೇನೆ ಬಾಂಬ್‌ನ್ನು ಸುರಕ್ಷಿತವಾಗಿ ಸ್ಫೋಟಿಸುವ ಮೂಲಕ ನಿಷ್ಕ್ರಿಯಗೊಳಿಸಿತು. ಸ್ಫೋಟದ ತೀವ್ರತೆ ಎಷ್ಟರಮಟ್ಟಿಗೆ ಇದ್ದಿತು ಎಂದರೆ ಹತ್ತಿರದ ಹಳ್ಳಿಗಳಲ್ಲಿಯೂ ಭೂಮಿಯಲ್ಲಿ ಕಂಪನಗಳು ಉಂಟಾಗಿದೆ.
ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿ ಪ್ರಕಾರ , “ಬಾಂಬ್ ಪತ್ತೆಯಾದಾಗಿನಿಂದ ಸ್ಥಳದಲ್ಲಿ ಭೀತಿಯ ವಾತಾವರಣವಿತ್ತು. ಎಲ್ಲರ ಸುರಕ್ಷತೆಗಾಗಿ ಪ್ರದೇಶವನ್ನು ಸುತ್ತುವರಿಸಿದ್ದೆವು. ಸೇನಾ ಅಧಿಕಾರಿಗಳ ಸಮ್ಮುಖದಲ್ಲಿ ಬಾಂಬ್ ನಿಷ್ಕ್ರಿಯಗೊಂಡ ಬಳಿಕ ಪರಿಸ್ಥಿತಿ ಸುಧಾರಿಸಿದೆ.”
ಅಚ್ಚರಿಯ ಸಂಗತಿಯೇನೆಂದರೆ — ಸುಮಾರು 80 ವರ್ಷಗಳ ನಂತರವೂ ಬಾಂಬ್ ಸಕ್ರಿಯ ಸ್ಥಿತಿಯಲ್ಲಿ ಉಳಿದಿತ್ತು.
ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಮೊದಲ ಘಟನೆಯಲ್ಲ. ಕಳೆದ ವರ್ಷ ಜಾರ್ಗ್ರಾಮ್ ಜಿಲ್ಲೆಯ ಭೂಲನ್‌ಪುರ ಗ್ರಾಮದಲ್ಲಿಯೂ ಇದೇ ರೀತಿ ಎರಡನೇ ಮಹಾಯುದ್ಧದ ಬಾಂಬ್ ಪತ್ತೆಯಾಗಿ, ಬಾಂಬ್ ಸ್ಕ್ವಾಡ್ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿತ್ತು. ಇತಿಹಾಸದ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಜಾರ್ಗ್ರಾಮ್‌ನಲ್ಲಿ ಯುದ್ಧ ವಿಮಾನಗಳ ವಾಯುನೆಲೆ ಇದ್ದು, ತೂಕ ಕಡಿಮೆ ಮಾಡಲು ಬಾಂಬ್‌ಗಳನ್ನು ಅದೇ ಪ್ರದೇಶದಲ್ಲಿ ಬೀಳಿಸುತ್ತಿದ್ದರು ಎನ್ನಲಾಗಿದೆ.