ಮಂಗಳೂರು: ಸ್ವಿಫ್ಟ್ ಕಾರಿನೊಂದಿಗೆ ಅಪಘಾತಕ್ಕೀಡಾಗಿ ರಸ್ತೆ ಬದಿಯೇ ನಿಂತಿದ್ದ ಲಾರಿಗೆ ಮತ್ತೊಂದು ಕಂಟೈನರ್ ಲಾರಿ ಢಿಕ್ಕಿ ಹೊಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ನಗರದ ಕುಂಟಿಕಾನ ಸಮೀಪ ಇಂದು ಸಂಭವಿಸಿದೆ.
ಇಂದು ಬೆಳಿಗ್ಗೆ ಸ್ವಿಫ್ಟ್ ಕಾರು ಹಾಗೂ ಲಾರಿ ಮಧ್ಯೆ ಅಪಘಾತಕ್ಕೀಡಾಗಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾದರೆ ಲಾರಿ ಕೆಟ್ಟು ಹೋಗಿ ರಸ್ತೆ ಬದಿಯೇ ನಿಂತಿತ್ತು. ಲಾರಿಯ ಹಿಂದುಗಡೆ ಸಿಗ್ನಲ್ ಲೈಟ್ ಹಾಕಿ ಬೇರೆ ಯಾವ ಮುಂಜಾಗ್ರತೆಯಾಗಲೀ ಅಥವಾ ಲಾರಿಯನ್ನು ತೆರವುಗೊಳಿಸದೇ ಅಲ್ಲಿಯೇ ನಿಲ್ಲಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಕಂಟೈನರ್ ಲಾರಿಯೊಂದು ಬಂದಿದ್ದು, ಎದುರು ನಿಂತ ಲಾರಿ ಕೆಟ್ಟು ನಿಂತಿರುವುದು ಅರಿವಿಗೆ ಬಾರದೆ ಲಾರಿಯನ್ನು ನಿಂತಿದ್ದ ಲಾರಿಯ ಇನ್ನೊಂದು ಬದಿಗೆ ಅದರ ಡ್ರೈವರ್ ನುಗ್ಗಿಸಿದ್ದಾನೆ. ಇದರಿಂದ ಲಾರಿ ತಡೆಗೋಡೆಗೆ ಸಿಲುಕಿ ಪಕ್ಕದಲ್ಲಿಯೇ ಢಿಕ್ಕಿ ಹೊಡೆದು ರಸ್ತೆ ಬದಿಗೆ ನಿಂತಿದ್ದು, ವಾಹನಗಳು ಸಾಗಲಾಗದೆ ಟ್ರಾಫಿಕ್ ಜಾಂ ಉಂಟಾಗಿದೆ.
ಇದೇ ಸಂದರ್ಭದಲ್ಲಿ ಪಕ್ಕದಲ್ಲಿ ಸಣ್ಣ ಪುಟ್ಟ ವಾಹನಗಳಿರುತ್ತಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ದೇವರ ದಯೆಯಿಂದ ಯಾವುದೇ ದುರಂತ ಸಂಭವಿಸಲಿಲ್ಲ ಎಂದು ಸಾರ್ವಜನಿಕರು ದೇವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಅಪಘಾತಕ್ಕೀಡಾದ ಲಾರಿಯನ್ನು ತೆರವುಗೊಳಿಸದಿರುವುದು, ಲಾರಿ ಅಪಘಾತಕ್ಕೀಡಾಗಿದ ಬಗ್ಗೆ ಸ್ಥಳದಲ್ಲಿ ಯಾವುದೇ ಸಂಕೇತಗಳನ್ನು ನೀಡದಿರುವುದು ಹಾಗೂ ಕಂಟೈನಲ್ ಲಾರಿ ಚಾಲಕನ ಅಜಾರೂಕತೆಯೇ ಈ ದುರ್ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.