ಮಂಗಳೂರು: ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಮಂಗಳೂರು ಉತ್ತರದ ಮಾಜಿ ಶಾಸಕ ಮೊಹಿದ್ದೀನ್ ಬಾವಾ ಅವರು ಬರೋಬ್ಬರಿ 1500 ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಬಡ ಕುಟುಂಬಗಳಿಗೆ ದೀಪಾವಳಿ ಕಿಟ್ ವಿತರಿಸಿ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಬಾವಾ ಫ್ರೆಂಡ್ಸ್ ಕುಡ್ಲ ಮತ್ತು ಮಂಗಳೂರು ಬಿ.ಎ. ಮೊಹಿದ್ದೀನ್ ಬಾವಾ ನೇತೃತ್ವದಲ್ಲಿ ʻದೀಪಾವಳಿ ಕರುಣಾ ಜ್ಯೋತಿ-2025ʼ ಮೂಲಕ ಸೇವಾ ಮತ್ತು ಸೌಹಾರ್ದ ಮಹೋತ್ಸವ ಕಾರ್ಯಕ್ರಮ ಮಂಗಳೂರಿನ ಕಾವೂರು ಮೈದಾನದಲ್ಲಿ ಮೊನ್ನೆ ನಡೆಯಿತು. ಈ ವೇಳೆ ಬಾವಾ ಸಾರಥ್ಯದಲ್ಲಿ 1500ಕ್ಕೂ ಅಧಿಕ ಮಹಿಳೆಯರಿಗೆ ಸೀರೆ ಮತ್ತು ಬಡ ಕುಟುಂಬಗಳಿಗೆ ದೀಪಾವಳಿ ಕಿಟ್ ವಿತರಣಾ ಸಮಾರಂಭ ನಡೆಯಿತು. ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವರಿಗೆ “ಬಾವಾ ಗೌರವ” ಸೇವಾ ಸನ್ಮಾನ ಮತ್ತು ಪ್ರತಿಭಾ ಅಭಿನಂದನಾ ಕಾರ್ಯಕ್ರಮವೂ ನೆರವೇರಿತು. ಈ ಸಂದರ್ಭದಲ್ಲಿ ಎಲ್ಲಾ ಧರ್ಮ, ಜಾತಿ ಸಮುದಾಯಗಳ ಜನರೊಂದಿಗೆ ಸಾಮೂಹಿಕ ಸೌಹಾರ್ದ ದೀಪಾವಳಿ ಆಚರಿಸಿ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಮೊಹಿದ್ದೀನ್ ಬಾವಾ, ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟಾಗಿ ಶಾಂತಿ ಸೌಹಾರ್ದತೆಯಿಂದ ಬಾಳಬೇಕಾದರೆ ಇಂತಹ ಸೌಹಾರ್ದ ಕಾರ್ಯಕ್ರಮಗಳು ಅಗತ್ಯ. ಅದ್ರಲ್ಲೂ ಇಂದು ನಾವು ಅಯೋಜಿಸಿದ ಕಾರ್ಯಕ್ರಮದಲ್ಲಿ ಇತರರಿಗೆ ಪ್ರೇರಣೆ ಆಗುವಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾಸಲಾಗಿದೆ ಮಾತ್ರವಲ್ಲದೆ ಒಂದುವರೆ ಸಾವಿರಕ್ಕೂ ಅಧಿಕ ಮಂದಿಗೆ ದೀಪಾವಳಿ ಪ್ರಯುಕ್ತ ಸೀರೆ ಮತ್ತು ದೀಪಾವಳಿ ಕಿಟ್ ವಿತರಿಸಲಾಗಿದೆ. ಇಂತಹ ಸಮಾಜ ಮುಖಿ ಕಾರ್ಯಗಳು ಇನ್ನಷ್ಟ ಈ ಜಿಲ್ಲೆಯಲ್ಲಿ ಆಗಲಿ ಎಂದು ಶುಭಹಾರೈಸಿದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ಮಾತನಾಡಿ, ಮೊಹಿದ್ದೀನ್ ಬಾವಾ ಅವರು ತಮ್ಮ ಸಮಾಜಮುಖಿ ಕೆಲಸವನ್ನು ಮುಂದುವರಿಸುತ್ತಿರುವುದು ನಿಜವಾಗಿಯೂ ಸಂತಸದ ವಿಚಾರ. ಕಳೆದ ಹಲವು ವರ್ಷಗಳಿಂದ ಅವರು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನನುರಾಗಿಯಾಗಿದ್ದಾರೆ. ದೀಪಾವಳಿ ಹಬ್ಬದಂದು ಬಡವರ ಬದುಕಿಗೆ ಆಶಾಕಿರಣವಾಗುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ. ಅವರ ಈ ಕಾರ್ಯಕ್ಕೆ ದೇವರ ಅನುಗ್ರಹ ಇರಲಿ, ಅವರಿಗೆ ದೇವರು ಇನ್ನಷ್ಟು ಶಕ್ತಿ ತುಂಬಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ವಿದ್ವಾಂಸರಾದ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಪ್ರಧಾನ ಧರ್ಮಗುರು ಫಾ. ಆ್ಯಂಡ್ರೂ ಲಿಯೋ ಡಿʼಸೋಜ, ಸಮಾಜ ಸೇವಕಿ ಚೂಡಾಮಣಿ, ಸಮಾಜಿಕ ಹೋರಾಟಗಾರ್ತಿ ಡಾ. ಶಂಸಾದ್, ಭವಾನಿ ಮತ್ತಿತರರು ಉಪಸ್ಥಿತರಿದ್ದರು.