ಬೆಂಗಳೂರು: ಹಿಂದೂ ಯುವತಿಯೊಂದಿಗೆ ಪ್ರೀತಿಯ ಹೆಸರಲ್ಲಿ ದೈಹಿಕ ಸಂಬಂಧ ಬೆಳೆಸಿ, ಬಳಿಕ ಮತಾಂತರಕ್ಕೆ ಒತ್ತಡ ಹೇರಿ, ಇನ್ನೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕುರಿತಂತೆ HSR ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಮ್ಮದ್ ಇಶಾಕ್ ಬಿನ್ ಅಬ್ದುಲ್ ರಸೂಲ್ ಎಂಬಾತ ಪ್ರಕರಣ ಆರೋಪಿಯಾಗಿದ್ದು, ಈತನ ಮೇಲೆ ಲವ್‌ಜಿಹಾದ್ ನಡೆಸಿದ ಆರೋಪ ಕೇಳಿಬಂದಿದೆ.
ದೂರಿನ ಪ್ರಕಾರ, ಇನ್ಸ್ಟಾಗ್ರಾಂ ಮೂಲಕ ಇಶಾಕ್ ಯುವತಿಗೆ ಪರಿಚಯಗೊಂಡು, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ 2024ರ ಅಕ್ಟೋಬರ್ 30ರಂದು ಧಣಿಸಂದ್ರದ ಎಲಿಮೆಂಟ್ಸ್ ಮಾಲ್ ಹತ್ತಿರ ಇಬ್ಬರು ಭೇಟಿಯಾಗಿ ಮದುವೆ ಕುರಿತಂತೆ ಚರ್ಚಿಸಿದ್ದರು. ಅಲ್ಲಿಂದ ಆತ ಯುವತಿಯನ್ನು ಖಾಸಗಿ ಲಾಡ್ಜ್‌ಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ.
ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ
ಆದರೆ 2025ರ ಸೆಪ್ಟೆಂಬರ್ ವೇಳೆಗೆ ಇಶಾಕ್ ಇನ್ನೂ ಹಲವು ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದಾನೆ ಎಂಬುದು ಯುವತಿಗೆ ತಿಳಿದುಬಂದಿದೆ. ಮದುವೆ ಆಗಬೇಕೆಂದು ಕೇಳಿದಾಗ ಆತ ಹಲವು ನೆಪ ಹೇಳಿ ದಿನ ಮುಂದೂಡುತ್ತಿದ್ದ. ಆನಂತರ ಆತ ಮತ್ತೊಬ್ಬ ಮುಸ್ಲಿಂ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತಾಂತರಕ್ಕೆ ಒತ್ತಡ, ಆತ್ಮಹತ್ಯೆ ಯತ್ನ
ಈ ಘಟನೆ ಬಳಿಕ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಇಶಾಕ್ ಕುಟುಂಬದವರು ಕರೆ ಮಾಡಿ, “ಕೇಸ್ ಮಾಡಬೇಡ, ಮಾತಾಡಿ ಬಗೆಹರಿಸೋಣ” ಎಂದಿದ್ದಾರೆ ಎನ್ನಲಾಗಿದೆ. ಇಶಾಕ್‌ನ ಅಣ್ಣ ಹಾಗೂ ಭಾವ ಮದುವೆಯಾಗಬೇಕೆಂದರೆ ಮೊದಲು ಇಸ್ಲಾಂ ಮತ ಸ್ವೀಕರಿಸಬೇಕು, ನಮಾಜ್ ಕಲಿಯಬೇಕು, 40 ದಿನ ಸಮಯಾವಕಾಶ ಇರುತ್ತದೆ ಎಂದು ಒತ್ತಡ ಹೇರಿದ್ದರೆಂದು ಯುವತಿ ಆರೋಪಿಸಿದ್ದಾಳೆ.