ಭೋಪಾಲ್: ಈ ಬಾರಿಯ ದೀಪಾವಳಿಯಲ್ಲಿ ಹುಟ್ಟಿಕೊಂಡ ಹುಚ್ಚು ಟ್ರೆಂಡ್‌ನಿಂದ 122 ಮಕ್ಕಳ ಕಣ್ಣು ಗಾಯವಾಗಿದ್ದು, 14 ಮಕ್ಕಳು ಕಣ್ಣನ್ನೇ ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಈ ಬಾರಿ ಮಕ್ಕಳಲ್ಲಿ “ಕಾರ್ಬೈಡ್ ಗನ್” ಅಥವಾ “ದೇಸಿ ಪಟಾಕಿ ಗನ್” ಎಂಬ ಹೊಸ ಕ್ರೇಜ್ ಹುಟ್ಟಿಕೊಂಡಿರುವುದು. ಪೋಷಕರಿಗೂ ವೈದ್ಯರಿಗೂ ದುಃಸ್ವಪ್ನ ಆಗಿದೆ.
ಮಧ್ಯಪ್ರದೇಶದಲ್ಲಿ ಕೇವಲ ಮೂರು ದಿನಗಳಲ್ಲಿ 122 ಕ್ಕೂ ಹೆಚ್ಚು ಮಕ್ಕಳು ಕಣ್ಣಿನ ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಇದರಲ್ಲಿ 14 ಮಕ್ಕಳು ದೃಷ್ಟಿ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರವು ಅಕ್ಟೋಬರ್ 18 ರಂದು ಈ ಕಾರ್ಬೈಡ್ ಗನ್‌ಗಳ ಮಾರಾಟವನ್ನು ನಿಷೇಧಿಸಿದ್ದರೂ, ವಿದಿಶಾ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಈ ಅಪಾಯಕಾರಿ ಆಟಿಕೆಗಳು ರೂ.150ರಿಂದ ರೂ.200ರ ವರೆಗೆ ಮಾರಾಟವಾಗುತ್ತಿವೆ. ಪ್ಲಾಸ್ಟಿಕ್ ಅಥವಾ ಟಿನ್ ಪೈಪ್‌ನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್, ಗನ್‌ಪೌಡರ್ ಹಾಗೂ ಬೆಂಕಿಕಡ್ಡಿ ತಲೆಗಳನ್ನು ತುಂಬಿ ತಯಾರಿಸಲಾಗುವ ಈ ಸಾಧನಗಳು ಬಾಂಬ್‌ನಂತೆ ಸ್ಫೋಟಗೊಳ್ಳುತ್ತವೆ.
ಭೋಪಾಲ್‌ನ ಹಮೀದಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ವರ್ಷದ ನೇಹಾ ಪ್ರಕಾರ “ಮನೆಯಲ್ಲಿ ತಯಾರಿಸಿದ ಕಾರ್ಬೈಡ್ ಗನ್ ಖರೀದಿಸಿದ್ದೆವು. ಅದು ಸ್ಫೋಟಗೊಂಡಾಗ ನನ್ನ ಒಂದು ಕಣ್ಣು ಸಂಪೂರ್ಣ ಸುಟ್ಟುಹೋಯಿತು. ಈಗ ನನಗೆ ಏನೂ ಕಾಣುತ್ತಿಲ್ಲ.” ಎಂದು ಹೇಳಿದ್ದಾಳೆ. ಮತ್ತೊಬ್ಬ ಯುವಕ ರಾಜ್ ವಿಶ್ವಕರ್ಮ, “ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ನೋಡಿ ಮನೆಯಲ್ಲಿ ಪಟಾಕಿ ಗನ್ ಮಾಡಲು ಪ್ರಯತ್ನಿಸಿದೆ. ಅದು ನನ್ನ ಮುಖದ ಮೇಲೆ ಸ್ಫೋಟಗೊಂಡಿತು — ನಾನು ಕಣ್ಣು ಕಳೆದುಕೊಂಡೆ” ಎಂದು ಹೇಳಿದ್ದಾನೆ.
ವಿದಿಶಾ ಪೊಲೀಸರ ಇನ್ಸ್‌ಪೆಕ್ಟರ್ ಆರ್.ಕೆ. ಮಿಶ್ರಾ ಅವರು ಮಾಧ್ಯಮಗಳ ಮುಂದೆ, “ಈ ಕಾರ್ಬೈಡ್ ಬಂದೂಕುಗಳನ್ನು ಮಾರಾಟ ಅಥವಾ ಪ್ರಚಾರ ಮಾಡುವವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಅಕ್ರಮ ಮಾರಾಟದ ಹಿನ್ನೆಲೆಯಲ್ಲಿ ಈಗಾಗಲೇ ಆರು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಭೋಪಾಲ್, ಇಂದೋರ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಆಸ್ಪತ್ರೆಗಳಲ್ಲಿ ಕಣ್ಣಿನ ವಾರ್ಡ್‌ಗಳು ಗಾಯಗೊಂಡ ಮಕ್ಕಳಿಂದ ತುಂಬಿವೆ. ಭೋಪಾಲ್‌ನ ಹಮೀದಿಯಾ ಆಸ್ಪತ್ರೆಯಲ್ಲೇ 72 ಗಂಟೆಗಳಲ್ಲಿ 26 ಮಕ್ಕಳನ್ನು ದಾಖಲಿಸಲಾಗಿದೆ.
ಹಮೀದಿಯಾ ಆಸ್ಪತ್ರೆಯ CMHO ಡಾ. ಮನೀಶ್ ಶರ್ಮಾ “ಕಾರ್ಬೈಡ್ ಗನ್ ಆಟಿಕೆ ಅಲ್ಲ – ಇದು ಅಪಾಯಕಾರಿ ಸ್ಫೋಟಕ. ಸ್ಫೋಟದಿಂದ ಹೊರಬರುವ ಲೋಹದ ತುಣುಕುಗಳು ಮತ್ತು ಕಾರ್ಬೈಡ್ ಆವಿಗಳು ಕಣ್ಣಿನ ರೆಟಿನಾವನ್ನು ಸುಡುತ್ತವೆ, ಶಾಶ್ವತ ಕುರುಡುತನಕ್ಕೆ ಕಾರಣವಾಗುತ್ತವೆ.” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮಾರಕ ಕ್ರೇಜ್‌ಗೆ ಕಾರಣವಾಗಿರುವುದು ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್. “ಫೈರ್‌ಕ್ರ್ಯಾಕರ್ ಗನ್ ಚಾಲೆಂಜ್” ಹೆಸರಿನ ವೈರಲ್ ವೀಡಿಯೊಗಳಲ್ಲಿ ಹದಿಹರೆಯದವರು ಈ ಗನ್‌ಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ.
ಕಾರ್ಬೈಡ್ ಗನ್ ಎಂದರೆ ಏನು?
ಕಾರ್ಬೈಡ್ ಗನ್ ಒಂದು ತಾತ್ಕಾಲಿಕವಾಗಿ (ಮನೆಯಲ್ಲೇ ಅಥವಾ ಸ್ಥಳೀಯವಾಗಿ) ತಯಾರಿಸುವ ಸಣ್ಣ ಸ್ಫೋಟಕ ಸಾಧನ. ಇದು ಪಟಾಕಿ ಅಥವಾ ಬಂದೂಕಿನಂತೆ ಶಬ್ದ ಮಾಡುತ್ತದೆ. ಕೆಲವರು ಪ್ಲಾಸ್ಟಿಕ್, ಟಿನ್ ಅಥವಾ ಲೋಹದ ಪೈಪ್‌ಗಳನ್ನು ಬಳಸಿ ಈ ಗನ್ ತಯಾರಿ ಮಾಡಿ, ಅದರೊಳಗೆ ಕ್ಯಾಲ್ಸಿಯಂ ಕಾರ್ಬೈಡ್, ನೀರು ಅಥವಾ ತೇವಾಂಶ, ಬೆಂಕಿಕಡ್ಡಿಯ ತಲೆಗಳು ಅಥವಾ ಗನ್‌ಪೌಡರ್ ಹಾಕುತ್ತಾರೆ. ಇವುಗಳ ಮಿಶ್ರಣದಿಂದ ಅಸೆಟಿಲಿನ್ (Acetylene Gas) ಎಂಬ ಸ್ಫೋಟಕ ಅನಿಲ ಹೊರಬರುತ್ತದೆ. ಈ ಅನಿಲಕ್ಕೆ ಬೆಂಕಿ ಹಚ್ಚಿದಾಗ ಅದು ಜೋರಾಗಿ ಸ್ಫೋಟಗೊಳ್ಳುತ್ತದೆ. ಇದರಿಂದ ಹೊರಬಂದ ಲೋಹದ ತುಣುಕುಗಳು, ಬಿಸಿಯಾದ ಅನಿಲ ಹಾಗೂ ಕಣಗಳು ಮುಖ, ಕಣ್ಣು ಅಥವಾ ಕೈಗೆ ತೀವ್ರ ಹಾನಿ ಉಂಟುಮಾಡುತ್ತವೆ. ಕಾರ್ಬೈಡ್ ಗನ್ ತಯಾರಿಸುವುದು, ಮಾರಾಟ ಮಾಡುವುದು ಅಥವಾ ಬಳಸುವುದು ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅಕ್ರಮವಾಗಿದೆ.