ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡಿನಲ್ಲಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯಲಿರುವ ಹದಿನೈದಕ್ಕೂ ಹೆಚ್ಚು ಕಾಮಗಾರಿಗಳ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.
ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬಹುಕಾಲದ ಬೇಡಿಕೆಯಂತೆ ಅತೀ ಅಗತ್ಯವಿರುವ ರಸ್ತೆ ಕಾಂಕ್ರೀಟೀಕರಣ, ತಡೆಗೋಡೆ ನಿರ್ಮಾಣ, ಕಾಲುದಾರಿ, ಆರ್.ಸಿ.ಸಿ ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುದಾನವನ್ನು ಹೊಂದಿಸಿಕೊಂಡು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದಕ್ಕೆ ತಡೆ ನೀಡಿತ್ತು. ಈ ಬಗ್ಗೆ ನಿರಂತರವಾಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಇಲ್ಲಿ ನಡೆಯಬೇಕಿರುವ ತುರ್ತು ಕಾಮಗಾರಿಯ ಬಗ್ಗೆ ಮನವರಿಕೆ ಮಾಡಿದ ಪರಿಣಾಮ ಇದೀಗ ಮತ್ತೆ ಹಿಂದಿನ ಬಿಜೆಪಿ ಸರ್ಕಾರದ ಕಾಮಗಾರಿಗೆ ಚಾಲನೆ ದೊರೆತಿದೆ ಎಂದರು.
ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನ ದೊರೆಯುತ್ತಿಲ್ಲವಾಗಿದ್ದು, ಕ್ಷೇತ್ರದ ಇತರೆಡೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಅದಾಗ್ಯೂ ಈ ಬಗ್ಗೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಪೂಜಾರಿ, ಪ್ರವೀಣ್ ನಿಡ್ಡೇಲ್, ಅಶ್ವಿತ್ ಕೊಟ್ಟಾರಿ, ರಾಮ್ ಪ್ರಸಾದ್, ವರುಣ್ ಅಂಬಟ್, ಭಾಸ್ಕರ ಚಂದ್ರ ಶೆಟ್ಟಿ, ಗಣೇಶ್, ಚಂದ್ರಶೇಖರ್, ಶಿವಾಜಿ ರಾವ್, ಹರಿ ಕೇಶವ, ಸುರೇಶ್ ರಾವ್, ವಿಜಯ, ಅಮರ್ ಶೆಟ್ಟಿ, ಚಂದ್ರ, ಅಜಿತ್ ಪಾಟೀಲ್, ಯೋಗೀಶ್, ಜಗದೀಶ್, ರೋಹಿಣಿ, ಲೋಲಾಕ್ಷಿ, ಕವಿತಾ, ಲಕ್ಷ್ಮಿ ನಾರಾಯಣ, ಯಾದವ ಗಾಣದಬೆಟ್ಟು, ಗಂಗಾಧರ್, ಸೀತಾರಾಮ್, ಕಮಲಾಕ್ಷ, ಶೋಭಾ ಪಲ್ಲಕೆರೆ, ಯಮುನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.