ಸುರತ್ಕಲ್: ಕರಾವಳಿ ಸೇವಾ ಪ್ರತಿಷ್ಠಾನ (ರಿ.), ಸುರತ್ಕಲ್–ಮಂಗಳೂರು ವತಿಯಿಂದ ಆಯೋಜಿಸಲಾದ ‘ದೀಪಾವಳಿ ಸಂಭ್ರಮ 2025’ ಕಾರ್ಯಕ್ರಮ ಅಕ್ಟೋಬರ್ 19, 25 ಮತ್ತು 26ರಂದು ಸುರತ್ಕಲ್ ಜಂಕ್ಷನ್ ಹಾಗೂ ಗೋವಿಂದ ದಾಸ ಕಾಲೇಜು ಮೈದಾನಗಳಲ್ಲಿ ಭವ್ಯವಾಗಿ ನಡೆಯಲಿದೆ. ಶಾಸಕರಾದ ಡಾ. ವೈ. ಭಾರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ನಡೆದಂತೆ ಈ ಬಾರಿಯೂ ದೀಪಾವಳಿ ಸಂಭ್ರಮ ವೈಭವದಿಂದ ಜರುಗಲಿದೆ ಎಂದು ಕರಾವಳಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಮಾಹಿತಿ ನೀಡಿದರು.
ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸಾಂಪ್ರದಾಯಿಕ ಕಲೆಗಳ ಪ್ರೋತ್ಸಾಹಕ್ಕಾಗಿ ಪ್ರತಿಷ್ಠಾನವು ಈ ಬಾರಿ ಕುಣಿತ ಭಜನಾ ಸ್ಪರ್ಧೆಯನ್ನು ಆಯೋಜಿಸಿದೆ. ಬೆಳಿಗ್ಗೆ 8.30ರಿಂದ ಶಾಲಾ ಆವರಣದಲ್ಲಿ ಆರಂಭವಾಗುವ ಅಂತರ್ ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಮಕ್ಕಳು, ಯುವಕರು ಹಾಗೂ ಮುಕ್ತ ವಿಭಾಗದ ತಂಡಗಳು ಭಾಗವಹಿಸಲಿವೆ. ಮಕ್ಕಳ ಭಜನಾ (16 ವರ್ಷಕ್ಕಿಂತ ಕಡಿಮೆ), ಯುವ ಭಜನಾ (16–30 ವರ್ಷ) ಮತ್ತು ಮುಕ್ತ ಭಜನಾ ವಿಭಾಗಗಳು ಇರುತ್ತವೆ. ಅದೇ ದಿನ ನೃತ್ಯ ಭಜನಾ ಸ್ಪರ್ಧೆ, ತುಳು ಲಿಪಿ ಕಲಿಕೆ, ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆಯೂ ನಡೆಯಲಿದೆ ಎಂದು ನುಡಿದರು.
ವಿಜೇತ ಭಜನಾ ತಂಡಗಳಿಗೆ ಕ್ರಮವಾಗಿ ಪ್ರಥಮ ₹15,555, ದ್ವಿತೀಯ ₹11,111 ಹಾಗೂ ತೃತೀಯ ₹7,777, ಹಾಗೂ ಪಾಲ್ಗೊಂಡ ತಂಡಗಳಿಗೆ ಗೌರವಧನ ನೀಡಲಾಗುವುದು. ಅದೇ ರೀತಿ ದೀಪಾವಳಿಯ ಸಂಭ್ರಮದ ಅಂಗವಾಗಿ ಸುರತ್ಕಲ್ ಜಂಕ್ಷನ್‌ನಲ್ಲಿ ಅಕ್ಟೋಬರ್ 25–26 – ತುಳುನಾಡು ಫುಡ್ ಫೇರ್ 2025 ನಡೆಯಲಿದೆ. ತುಳುನಾಡಿನ ಸಾಂಪ್ರದಾಯಿಕ ಮತ್ತು ಆಧುನಿಕ ರುಚಿಗಳ ಸಂಯೋಜನೆಯ 400ಕ್ಕೂ ಹೆಚ್ಚು ತಳಿಗಳ ಅಡುಗೆ ವೈವಿಧ್ಯ ಆಹಾರಪ್ರಿಯರನ್ನು ಆಕರ್ಷಿಸಲಿವೆ. ಸಂಜೆ ವೇಳೆ ಪ್ರಸಿದ್ಧ ಸಂಗೀತ ತಂಡ ‘Band Ecstasy’ ನಿಂದ ಲೈವ್ ಮ್ಯೂಸಿಕ್ ಶೋ ನಡೆಯಲಿದ್ದು, ಜನಪ್ರಿಯ ಗಾಯಕರಾದ ಸಂದೇಶ್ ಬಬನ್ನಾ, ಪಲ್ಲವಿ ಪ್ರಭು ಹಾಗೂ ಸುಪ್ರೀತ್ ಸಪಾಳಿಗ ಭಾಗವಹಿಸಲಿದ್ದಾರೆ ಎಂದು ಭರತ್ ರಾಜ್ ಕೃಷ್ಣಾಪುರ ವಿವರಿಸಿದರು.
ಅಕ್ಟೋಬರ್ 26 – ದೀಪಾವಳಿ ನೈಟ್ಸ್ 2025
ಸಾಂಸ್ಕೃತಿಕ ವೈಭವದ ಅಂತಿಮ ದಿನವಾದ ಅಕ್ಟೋಬರ್ 26ರಂದು ಸಂಜೆ 6 ಗಂಟೆಯಿಂದ ಗೋವಿಂದ ದಾಸ ಕಾಲೇಜು ಮೈದಾನದಲ್ಲಿ ‘ದೀಪಾವಳಿ ನೈಟ್ಸ್ 2025’ ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಯಲ್ಲಿ ಜನಪ್ರಿಯ ಕಲಾವಿದರು ಹೇಮಂತ್, ವಿದ್ಯಾ ಸುವರ್ಣ, ಸೌಜನ್ಯ ಹೆಗ್ಡೆ, ಅನನ್ಯ ಪ್ರಕಾಶ್, ಜಸ್ಕರನ್ ಸಿಂಗ್ ಮತ್ತು RJ ಅನುರಾಗ್ ತಮ್ಮ ಗಾಯನ ಮತ್ತು ನಿರೂಪಣೆಯಿಂದ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.ಈ ಕಾರ್ಯಕ್ರಮವನ್ನು Red FM ಮತ್ತು Skyryders Events ಸಹಯೋಗದಿಂದ ಆಯೋಜಿಸಲಾಗಿದೆ. ಸಾಂಪ್ರದಾಯಿಕ ಭಜನಾ ಸ್ಪರ್ಧೆಗೆ ಪ್ರಥಮ ₹25,000, ದ್ವಿತೀಯ ₹20,000, ತೃತೀಯ ₹15,000 ನಗದು ಬಹುಮಾನಗಳು ನೀಡಲಾಗುತ್ತವೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವ ಮನಪಾ ಸದಸ್ಯ ವರುಣ್ ಚೌಟ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಶ್ರಿತ್ ನೋಂಡ, ಟ್ರಸ್ಟಿಗಳಾದ ಸಂಜಿತ್ ಶೆಟ್ಟಿ, ಪುಷ್ಪರಾಜ್ ಪುತ್ರನ್ ಹಾಗೂ ಪುಷ್ಪರಾಜ್ ಮುಕ್ಕ ಉಪಸ್ಥಿತರಿದ್ದರು.