ನವದೆಹಲಿ: ಬಿಗ್ ಬಾಸ್ ಸೀಸನ್ 18 ಖ್ಯಾತಿಯ ನಟಿ ಎಡಿನ್ ರೋಸ್ ಅವರು ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಎದುರಿಸಿದ ಭಯಾನಕ ಕಿರುಕುಳದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಡಿನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿದ ವಿಡಿಯೋದಲ್ಲಿ, “ಬೆಳಿಗ್ಗೆ 7 ಗಂಟೆ ಸಮಯದಲ್ಲಿ ದೇವಾಲಯದ ಮುಂದೆ ನಿಂತಿದ್ದೆ. ನನ್ನ ಫೋಟೋಗ್ರಾಫರ್ ಬರುವುದು 10 ನಿಮಿಷ ತಡವಾಗಿದ್ದರಿಂದ, ಸುರಕ್ಷತೆಯ ಕಾರಣಕ್ಕಾಗಿ ದೇವಾಲಯದ ಬಳಿಯೇ ನಿಂತಿದ್ದೆ. ಸಂಪೂರ್ಣವಾಗಿ ಮುಚ್ಚಿದ ಉಡುಪಿನಲ್ಲಿ ಇದ್ದರೂ, ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ಮೂರು ಬಾರಿ ದೇಹಕ್ಕೆ ಢಿಕ್ಕಿ ಹೊಡೆದ. ಲವ್ ಸಾಂಗ್ ಹಾಡುತ್ತಾ ಅಸಭ್ಯವಾಗಿ ವರ್ತಿಸಿದ,” ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಅವರು ಆ ವ್ಯಕ್ತಿಯತ್ತ ಕ್ಯಾಮೆರಾವನ್ನು ತಿರುಗಿಸಿ “ಇವನೇ ಆ ವ್ಯಕ್ತಿ. ನಾನು ದೇವಾಲಯದ ಮುಂದೆ ನಿಂತಿದ್ದಾಗ ಅದೇನು ಮಾಡಿದ,” ಎಂದು ಬರೆದಿದ್ದಾರೆ.
ಎಡಿನ್ ರೋಸ್ ಮುಂದುವರೆದು, “ಅವನಿಗೆ ನಾನು ಯಾರು ಅನ್ನೋದು ಗೊತ್ತಿಲ್ಲ. ಅಲ್ಲಿ ಕೆಲವು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಅವರು ಸಂಪೂರ್ಣ ಘಟನೆಯನ್ನು 4K ಯಲ್ಲಿ ರೆಕಾರ್ಡ್ ಮಾಡಿದ್ದಾರೆ. ನನಗೆ ಅವನ ಮುಖಕ್ಕೆ ಹೊಡೆಯಬೇಕು ಅನ್ನಿಸಿತು. ಆದರೂ ಕೋಪವನ್ನು ನಿಯಂತ್ರಿಸಿದೆ” ಎಂದು ಹೇಳಿದ್ದಾರೆ.
ಅನಂತರ ಎಡಿನ್ ದೇವಾಲಯದ ಒಳಗೆ ತೆರಳಿ ಅಲ್ಲಿ ಇದ್ದ ವ್ಯಕ್ತಿಯಲ್ಲಿ ಸಹಾಯಕ್ಕಾಗಿ ವಿನಂತಿಸಿದ್ದಾರೆ. “ನಾನು ಯಾವುದಾದರೂ ತಪ್ಪು ಉಡುಪಿನಲ್ಲಿ ಬಂದಿದ್ದೆನಾ? ಸಂಪೂರ್ಣ ಮುಚ್ಚಿದ ಉಡುಪು ಧರಿಸಿದ್ದೇನೆ. ಹಾಗಿದ್ದರೂ ಅವನು ನನ್ನ ಮೇಲೆ ಯಾಕೆ ಅಸಭ್ಯವಾಗಿ ವರ್ತಿಸಿದ?” ಎಂದು ಪ್ರಶ್ನಿಸಿದ್ದಾರೆ.
ಕಳೆದ ಕ್ಷಣದಲ್ಲಿ, ಎಡಿನ್ ಅವರ ಫೋಟೋಗ್ರಾಫರ್ ಸ್ಥಳಕ್ಕೆ ಆಗಮಿಸಿ ಆ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಥಳಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಆ ವ್ಯಕ್ತಿ, “ಮಾರೋ, ಗಲತಿ ಕಿ ಹೈ ಮೇನೇ,” ಎಂದು ಹೇಳುತ್ತಾ ಕ್ಷಮೆ ಯಾಚಿಸುತ್ತಿದ್ದಾನೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ದೆಹಲಿಯ ಮಹಿಳಾ ಸುರಕ್ಷತೆ ಕುರಿತಂತೆ ಮತ್ತೆ ಪ್ರಶ್ನೆ ಎತ್ತಿದ್ದಾರೆ.