ಇತ್ತೀಚೆಗೆ ನಟಿ ರಮೋಲಾ, ನಿರ್ಮಾಪಕ ಹೇಮಂತ್ ಅವರ ವಿರುದ್ಧ “ಅಶ್ಲೀಲವಾಗಿ ವರ್ತಿಸಿದ್ದಾರೆ” ಎಂಬ ಗಂಭೀರ ಆರೋಪ ಮಾಡಿದ್ದರು. ಇದೀಗ ಆ ಆರೋಪಕ್ಕೆ ತಿರುಗೇಟು ನೀಡಿರುವ ಹೇಮಂತ್, ರಮೋಲಾ ತಮ್ಮ ವಿರುದ್ಧ ತಪ್ಪು ಆರೋಪ ಮಾಡಿದ್ದಾರೆ ಎಂದು ಹೇಳಿ ಫಿಲಂ ಚೇಂಬರ್‌ಗೆ ದೂರು ನೀಡಿದ್ದಾರೆ.
ಹೇಮಂತ್ ಅವರು ತಮ್ಮ ದೂರಿನಲ್ಲಿ, “ನಟಿ ರಮೋಲಾ ಅವರಿಗೆ ನೀಡಬೇಕಾದ ಎಲ್ಲಾ ಪಾವತಿಗಳನ್ನು ಪೂರ್ಣಗೊಳಿಸಿದ್ದೇನೆ. ಆದರೂ ಅವರು ನನ್ನ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬ ಜೀವನದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಿವೆ. ನನ್ನ ಹೆಂಡತಿ ಗರ್ಭಿಣಿಯಾಗಿದ್ದು, ಈ ರೀತಿಯ ಸುಳ್ಳು ಆರೋಪಗಳಿಂದ ಮಾನಸಿಕವಾಗಿ ತುಂಬಾ ನೊಂದಿದ್ದಾರೆ. ಅವರ ಆರೋಗ್ಯಕ್ಕೆ ಏನಾದರೂ ಹಾನಿಯಾದರೆ, ಅದಕ್ಕೆ ನಟಿ ರಮೋಲಾ ನೇರ ಕಾರಣವಾಗುತ್ತಾರೆ,” ಎಂದು ತಿಳಿಸಿದ್ದಾರೆ.
ಅಸಲಿಗೆ ಏನಾಯಿತು?
ನಟಿ ರಮೋಲಾ ‘ರಿಚ್ಚಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದರೂ, ಚಿತ್ರದ ಪ್ರಮೋಷನ್ ವೇಳೆ ಅವರು ಹಾಜರಾಗಲಿಲ್ಲ ಎಂದು ನಿರ್ಮಾಪಕರು ಹಿಂದೆ ದೂರಿಸಿದ್ದರು.
ಈ ಹಿಂದೆ ಕೂಡಾ ‘ರಿಚ್ಚಿ’ ಚಿತ್ರದ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕ ರಿಚ್ಚಿ ಹಾಗೂ ಹೇಮಂತ್ ಅವರು ಫಿಲಂ ಚೇಂಬರ್‌ಗೆ ದೂರು ನೀಡಿ, “ರಮೋಲಾ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ, ಕರೆ ಮಾಡಿದರೂ ಪ್ರತಿಕ್ರಿಯಿಸುತ್ತಿಲ್ಲ,” ಎಂದು ತಿಳಿಸಿದ್ದಾರೆ.
ಈ ಹಿಂದಿನ ದೂರಿನ ಬೆನ್ನಲ್ಲೇ ಇದೀಗ ಹೇಮಂತ್ ಮತ್ತೊಂದು ಹೊಸ ದೂರು ದಾಖಲಿಸಿರುವುದು ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಫಿಲಂ ಚೇಂಬರ್ ಮುಂದಿನ ದಿನಗಳಲ್ಲಿ ಇಬ್ಬರ ಹೇಳಿಕೆಗಳನ್ನು ಪಡೆದು ವಿಷಯವನ್ನು ಸ್ಪಷ್ಟಪಡಿಸುವ ಸಾಧ್ಯತೆ ಇದೆ.