ಬೆಳ್ತಂಗಡಿ: ಕುವೆಟ್ಟು ಗ್ರಾಮದ ಶಕ್ತಿನಗರ ಸರ್ಕಲ್ ನಲ್ಲಿ ತನಗರಿವಿಲ್ಲದೆ ಎರಡು ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೆಟ್ ಕಳೆದುಕೊಂಡಿದ್ದ ದಂಪತಿಗೆ, ಕುವೆಟ್ಟು ಗ್ರಾಮದ ಬದ್ಯಾರ್ ನಿವಾಸಿ ಸಲೀಂ ಎಂಬವರ ಪುತ್ರ ಝೈನುದ್ದೀನ್ ಆಭರಣವನ್ನು ಮರಳಿಸಿ ಪ್ರಾಮಾಣಿಕತೆಯ ಅಪೂರ್ವ ನಿದರ್ಶನ ನೀಡಿದ್ದಾರೆ.
ರಿಕ್ಷಾ ಚಾಲಕರಾಗಿರುವ ಅವರಿಗೆ ಈ ಆಭರಣ ಸಿಕ್ಕಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ಸ್ಥಳೀಯವಾಗಿ ಹಲವರ ಮೊಬೈಲ್ ಸ್ಟೇಟಸ್ ನಲ್ಲಿ ಈ ಚಿನ್ನ ಕಳೆದುಹೋಗಿರುವ ಬಗ್ಗೆ ಸಂದೇಶಗಳು ಹರಿದಾಡುತ್ತಿತ್ತು. ಅದನ್ನು ಗಮನಿಸಿದ ತಕ್ಷಣ ಆ ನಂಬರ್ ಗೆ ಕರೆ ಮಾಡಿದಾಗ ಅದು ಸಿದ್ದೀಕ್ ಎಂಬವರ ಪತ್ನಿ
ಫರ್ಝಾನ ಅವರು ಬದ್ಯಾರ್ ನ ತಾಯಿ ಮನೆಯಿಂದ ಪತಿಯ ಮನೆ ಮಲೆಬೆಟ್ಟು ಇಲ್ಲಿಗೆ ಹೋಗುವ ವೇಳೆ ಕಳೆದುಕೊಂಡಿದ್ದೆಂದು ಖಚಿತಪಡಿಸಿ ಅವರಿಗೆ ಈ ಆಭರಣವನ್ನು ಹಸ್ತಾಂತರಿಸಿದರು.
ಝೈನುದ್ದೀನ್ ಅವರ ಈ ಪ್ರಾಮಣಿಕತೆಯನ್ನು ಮೆಚ್ಚಿ ಸಿದ್ದೀಕ್ ಅವರು ಝೈನುದ್ದೀನ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ ಮಹಮ್ಮದ್ ಹನೀಫ್ ಉಜಿರೆ, ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಕಾಶಿಪಟ್ಣ ಉಪಸ್ಥಿತರಿದ್ದರು.