ನವದೆಹಲಿ: ಬರೋಬ್ಬರಿ ಎರಡು ವರ್ಷಗಳು ಅಂದರೆ 738 ದಿನಗಳು, 17,712 ಗಂಟೆಗಳು. ಇಷ್ಟೊಂದು ಕಾಲದ ಬಳಿಕ ಇಸ್ರೇಲಿ ದಂಪತಿ ನೋವಾ ಅರ್ಗಮಾನಿ ಮತ್ತು ಅವಿನಾಟನ್ ಓರ್ ಮತ್ತೆ ಒಂದಾದ ಕ್ಷಣ ಇಸ್ರೇಲ್‌ನಲ್ಲಿ ಭಾವುಕತೆಯನ್ನು ಸೃಷ್ಟಿಸಿದೆ.
ಗಾಜಾದಲ್ಲಿ ಹಮಾಸ್ ಕೈದಿಯಾಗಿದ್ದ ಅವಿನಾಟನ್ ಓರ್, ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮದ ಭಾಗವಾಗಿ ಸೋಮವಾರ ಬಿಡುಗಡೆಯಾದ 20 ಒತ್ತೆಯಾಳುಗಳಲ್ಲಿ ಒಬ್ಬರು. ರೀಮ್ ಕ್ರಾಸಿಂಗ್‌ನಲ್ಲಿ ಓರ್ ಅವರನ್ನು ಅವರ ಗೆಳತಿ ನೋವಾ ಅರ್ಗಮಾನಿ ಅಪ್ಪಿಕೊಂಡಾಗ, ಇಬ್ಬರೂ ಕಣ್ಣೀರಿನಿಂದ ಕರಗಿದರು. ಈ ಹೃದಯಸ್ಪರ್ಶಿ ದೃಶ್ಯವನ್ನು ಇಸ್ರೇಲ್ ರಕ್ಷಣಾ ಪಡೆಗಳು (IDF) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “ಅವರು ಕೊನೆಗೂ ಮತ್ತೆ ಒಂದಾಗಿದ್ದಾರೆ” ಎಂದು ಬರೆದು ಶೀರ್ಷಿಕೆ ನೀಡಿದೆ.
ಅಕ್ಟೋಬರ್ 7, 2023ರಂದು ಇಬ್ಬರೂ ನೋವಾ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಹಮಾಸ್ ಉಗ್ರರು ದಾಳಿ ನಡೆಸಿ ಇವರನ್ನು ಅಪಹರಿಸಿದ್ದರು. ಬಳಿಕ ಗಾಜಾದ ಸುರಂಗಗಳಲ್ಲಿ ಅವರನ್ನು ಸೆರೆಮನೆಗೆ ಕೊಂಡೊಯ್ದರು. ಅರ್ಗಮಾನಿಯನ್ನು ಕಳೆದ ವರ್ಷ ಜೂನ್‌ನಲ್ಲಿ 245 ದಿನಗಳ ಬಂಧನದ ನಂತರ IDF ರಕ್ಷಿಸಿತು, ಆದರೆ ಓರ್ ಇನ್ನೂ ಗಾಜಾದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು.
ಅರ್ಗಮಾನಿ ನಂತರ ಬರೆದಿದ್ದ ಪೋಸ್ಟ್‌ನಲ್ಲಿ, “ಅಂದು ರಾತ್ರಿ ನಾವು ಓಡುತ್ತಿದ್ದೆವು, ಬದುಕುಳಿಯಲು ಪ್ರಾರ್ಥಿಸುತ್ತಿದ್ದೆವು. ಅವಿನಾಟನ್ ಜೀವಂತನಾಗಿದ್ದಾನೋ ಎಂಬ ಭಯದಲ್ಲಿ ನಾನು ಪ್ರತಿದಿನ ಬದುಕುತ್ತಿದ್ದೆ” ಎಂದು ಬರೆದಿದ್ದರು.
ಅವಿನಾಟನ್ ಓರ್ ಎನ್ವಿಡಿಯಾದ ನೆಟ್‌ವರ್ಕಿಂಗ್ ವಿಭಾಗದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಬಿಡುಗಡೆ ನಂತರ, ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಮ್ಮ ಸಿಬ್ಬಂದಿಗೆ ಭಾವನಾತ್ಮಕ ಪತ್ರ ಬರೆದು, “ಎರಡು ವರ್ಷಗಳ ಕತ್ತಲೆಯ ನಂತರ ಅವಿನಾಟನ್ ಮನೆಗೆ ಬಂದಿದ್ದಾರೆ. ಅವರ ತಾಯಿ ಡಿಟ್ಜಾ ಅವರ ಧೈರ್ಯ ನಮಗೆ ಸ್ಫೂರ್ತಿ” ಎಂದು ಹೇಳಿದರು.
ಇದೇ ವೇಳೆ, ಇತರ ಒತ್ತೆಯಾಳುಗಳ ಪುನರ್ಮಿಲನ ದೃಶ್ಯಗಳೂ ದೇಶವ್ಯಾಪಿ ವೈರಲ್ ಆಗುತ್ತಿದೆ.
ಒಬ್ಬ ಬಾಲಕ ಐಟನ್ ಮೋರ್, ಕೋಣೆಗೆ ಕಾಲಿಟ್ಟ ಕ್ಷಣದಲ್ಲೇ ತಂದೆ ಅವನನ್ನು ಗಾಢವಾಗಿ ಅಪ್ಪಿದರು. ತಾಯಿ ಕೂಡ ಸೇರಿಕೊಂಡು ಮೂವರು ಆನಂದಭಾಷ್ಪ ಸುರಿಸಿದರು. ಮತ್ತೊಬ್ಬ ಓಮ್ರಿ ಮಿರಾನ್, ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಪುನರ್ಮಿಲನಗೊಂಡರು — ಕಿರಿಯ ಮಗಳು ಅಪಹರಣದ ಸಮಯದಲ್ಲಿ ಕೇವಲ ಆರು ತಿಂಗಳ ವಯಸ್ಸಿನವಳಾಗಿದ್ದಳು.
ಎರಡು ವರ್ಷಗಳ ಅಂಧಕಾರದ ನಂತರ ಮತ್ತೆ ಬೆಳಕಿನಡೆಗೆ ಸಾಗಿದ ಆತ್ಮೀಯರ ಪುರ್ನಮಿಲನ ದೇಶದಲ್ಲಿ ಶಾಂತಿ ಮತ್ತು ಸಂತೋಷ ತಂದಿದೆ.