ಮಂಗಳೂರು: ಕಾರ್ಕಳ ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ(23) ಬೆಳ್ಮಣ್‌ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಬರೆದ ಡೆತ್‌ನೋಟ್‌ಸಿಕ್ಕಿದೆ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಬಯೋಮೆಡಿಕಲ್ ಆಗಿದ್ದ ಅಭಿಷೇಕ್‌ತನ್ನ ಡೆತ್‌ನೋಟ್‌ನಲ್ಲಿ ತನ್ನ ಗೆಳೆಯರಿಂದಾದ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈತ ಬರೆದಿದ್ದಾನೆ ಎನ್ನಲಾದ ಮುದ್ದಾದ ಅಕ್ಷರಗಳುಳ್ಳ ಏಳು ಪುಟಗಳ ಡೆತ್‌ನೋಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಕರಣದ ಬಗ್ಗೆ ಉಡುಪಿ ಎಸ್‌ಪಿಪಿ ಹರಿರಾಂ ಶಂಕರ್ ಪ್ರತಿಕ್ರಿಯಿಸಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಅಭಿಷೇಕ್ ಬರೆದ ಡೆತ್‌ನೋಟ್ ಬ್ಲ್ಯಾಕ್‌ಮೇಲ್ ಮಾಡಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಿದವರ ಮೊಬೈಲ್ ವಶಪಡಿಸಿ ತನಿಖೆ ನಡೆಸಲಾಗುತ್ತದೆ. ಆದರೆ ಆ ಯುವತಿ ವಿಡಿಯೋ ಹಂಚಿಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿಲ್ಲ ಆದರೆ ಆಕೆಯ ಮೊಬೈಲನ್ನೂ ವಶಪಡಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹನಿಟ್ರ್ಯಾಪ್ ಶಂಕೆ? ಅಂಗಾಂಗ ದಾನ ಮಾಡಲು ಸಲಹೆ
ಅಭಿಷೇಕ್ ಡೆತ್‌ನೋಟ್ ಗಮನಿಸುವಾಗ ಆತನನ್ನು ಹನಿಟ್ರ್ಯಾಪ್ ಮಾಡಿರಬಹುದೆಂದು ಶಂಕಿಸಲಾಗುತ್ತಿದೆ. ಡೆತ್‌ನೋಟಲ್ಲಿ ಆತ ತನಗೆ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾನೆ. ತನಗೆ ಸಾಯಲು ಮನಸ್ಸಿಲ್ಲ, ಆದರೆ ದಿನಾ ಸಾಯುವುದಕ್ಕಿಂತ ಒಮ್ಮೆ ಸಾಯುವುದೇ ಮೇಲು, ಸ್ಲೀಪಿಂಗ್ ಟಾಬ್ಲೆಟ್ ಕುಡಿದರೆ ಅಂಗಾಂಗಳು ನಾಶವಾಗುವುದರಿಂದ ನೋವಾದರೂ ಪರವಾಗಿಲ್ಲ ಎಂದು ನೇಣು ಬಿಗಿಯುತ್ತೇನೆ. ತನ್ನ ಅಂಗಾಂಗಳನ್ನು ದಾನ ಮಾಡಿ ಎಂದು ಸ್ವ ಇಚ್ಛೆಯಿಂದ ಹೇಳುತ್ತಿದ್ದೇನೆ ಎಂದೆಲ್ಲಾ ಹಲವು ಅಂಶಗಳಿವೆ.
ಡೆತ್‌ನೋಟ್‌ನಲ್ಲಿನ ಗಂಭೀರ ಆರೋಪಗಳು
ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರ ಹೆಸರನ್ನು ಉಲ್ಲೇಖಿಸಿ, ತಮ್ಮ ಸಾವಿಗೆ ಅವರೇ ಕಾರಣರಾಗಿದ್ದಾರೆಂದು ಅಭಿಷೇಕ್ ಆರೋಪಿಸಿದ್ದಾನೆ. ಹಿಡನ್ ಕ್ಯಾಮರಾದ ಮೂಲಕ ಅಶ್ಲೀಲ ಚಿತ್ರ-ವೀಡಿಯೋ ತೆಗೆದು, 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದಿದ್ದಾನೆ. ಅವಳ ವಾಟ್ಸ್ಯಾಪನ್ನು ವೆಬ್‌ಮೂಲಕ ಕನೆಕ್ಟ್ ಮಾಡಿ ನೋಡಿದಾಗ ತುಂಬಾ ವಿಚಾರ ಗೊತ್ತಾಗಿದೆ. ಅದನ್ನು ಫೋನಿನಲ್ಲಿ ಸೇವ್ ಮಾಡಿದ್ದೇನೆ ಎಂದಿದ್ದಾನೆ.
ಮತ್ತೊಬ್ಬ ಯುವತಿ ಆ ವೀಡಿಯೋಗಳನ್ನು ವಿದೇಶದ ಸ್ನೇಹಿತರಿಗೆ ಕಳುಹಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಬ್ಲ್ಯಾಕ್‌ಮೇಲ್ ತಂಡವು “ಹಣ ಕೊಡದಿದ್ದರೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ʻ20 ಲಕ್ಷ ಕೊಟ್ಟರೆ ಬಿಡುತ್ತೇವೆ” ಎಂದು ಒತ್ತಡ ಹೇರಿದ್ದಾರೆ. “ನಾನು ಜೀವಂತವಾಗಿದ್ದು ದಿನಾ ಸಾಯುವಂತೆ ಆಗುತ್ತಿದೆ, ಇವರು ಇನ್ನೊಬ್ಬರನ್ನು ಬಲಿಯಾಗಿಸುತ್ತಾರೆ, ಇವರ ದಂಧೆ ನಿಲ್ಲಬೇಕು” ಎಂದು ಬರೆದಿದ್ದಾನೆ.
ತನ್ನ ರೂಮೇಟ್ ಒಬ್ಬನ ತಂದೆ ತಾಯಿಯ ಬಳಿ ಅಭಿಷೇಕ್ ಕ್ಷಮೆ ಯಾಚಿಸಿದ್ದಾನೆ. ತಾವು ರೂಮಿಗೆ ಹೋಗಿರುವ ವಿಚಾರವನ್ನು ಅಭಿಷೇಕ್ ಪ್ರಸ್ತಾಪಿಸಿದ್ದು, ಅಲ್ಲಿ ಒಬ್ಬಳು ಹಿಡನ್ ಕ್ಯಾಮರಾ ಮೂಲಕ ಅಶ್ಲೀಲ ಫೋಟೋ, ವಿಡಿಯೋಗಳನ್ನು ತೆಗೆದು ಗೆಳೆಯನ ಬಳಿ 5 ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದಾರೆ. ಆತ ಮನೆ ಕಟ್ಟುತ್ತಿದ್ದರಿಂದ ಕೊಲು ಸಾಧ್ಯವಾಗಲಿಲ್ಲ. ಮರ್ಯಾದೆ ಹೋಗಬಹುದು ಎಂದು ಹಣ ಕೊಡಲು ಒಪ್ಪಿದ್ದ. ಆದರೆ ಮೂರ್ನಾಲ್ಕು ದಿನಗಳಿಂದ ಆತ ಈಗ ಎಲ್ಲಿದ್ದಾನೋ ಗೊತ್ತಿಲ್ಲ ಎಂದು ವಿವರಿಸಿದ್ದಾನೆ.
ನನಗೆ ಸೆಕ್ಸ್‌ಆಸೆ ತೋರಿಸಿ ತನ್ನನ್ನು ಹಿಡಿತದಲ್ಲಿಟ್ಟು ಬೆದರಿಕೆ ಹಾಕಿದ್ದಾರೆ. ಪ್ರವೀಣ್ ನೆಟ್ಟಾರ್ ಹತ್ಯೆಯಾದ ದಿನ ʻಓಂ ಶಾಂತಿʼ ಎಂದು ವಾಟ್ಸ್ಯಾಪ್ ಸ್ಟೇಟಸ್ ಹಾಕಿದ್ದಕ್ಕೆ ಆಕ್ಷೇಪಿಸಿ ಬ್ಲ್ಯಾಕ್‌ಮೇಲ್ ಮಾಡಿ ತೆಗೆಸಿದ್ದಾಗಿ ಆರೋಪಿಸಿದ್ದಾನೆ. ಅಲ್ಲದೆ ಬೈತುರ್ಲಿ ಎಂಬಲ್ಲಿ ತಮಗೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾನೆ. ತನ್ನ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ತಮಾಷೆ ಮಾಡಿದ್ದಾಗಿ ಆರೋಪಿಸಿದ್ದಾನೆ. ನೀನು ದೂರು ಕೊಟ್ಟರೆ ನೀನು ರೇಪ್ ಮಾಡಿದ್ದಾಗಿ ಕಂಪ್ಲೈಂಟ್ ಉಲ್ಟಾ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾನೆ.
ತಾನು ಸಾಕಷ್ಟು ಬಾರಿ ಹಣ ನೀಡಿದ್ದೇನೆ. ಆನ್‌ಲೈನ್ ಮೂಲಕ ಪೇ ಮಾಡಿದರೆ ಕ್ಯಾಷ್ ಮೂಲಕ ಕೊಡು, ಆನ್‌ಲೈನ್ ಪೇಮೆಂಟ್ ಮಾಡಿದರೆ ಸಾಕ್ಷಿ ಸಿಗುತ್ತದೆ ಎಂದು ತನ್ನ ಕಪಾಳಕ್ಕೆ ಸಾಕಷ್ಟು ಬಾರಿ ಹೊಡೆದಿದ್ದಾರೆ. ಎಲ್‌ಐಸಿ ಇನ್ಷೈರೆನ್ಸ್‌ನಲ್ಲಿ ನಾಮಿನಿಯಾಗಿ ತನ್ನ ಹೆಸರು ಹಾಕುವಂತೆ ಹುಡುಗಿ ಬೆದರಿಸಿದ್ದಾಳೆ. ಎಲ್‌ಐಸಿ ಹಣಕ್ಕಾಗಿ ತನ್ನನ್ನು ಕೊಲ್ಲಬಹುದು ಎಂದು ಭಯದಿಂದ ಹೆಸರು ಹಾಕದೆ 20 ಸಾವಿರ ಹಣ ನೀಡಿದ್ದೇನೆ. ತಂಡಕ್ಕೆ ನಾನು ಇದುವರೆಗೆ 3ರಿಂದ 4 ಲಕ್ಷ ಹಣ ನೀಡಿದ್ದೇನೆ. ಇನ್ನು ಕೊಡಲು ಸಾಧ್ಯವಿಲ್ಲ ಬಿಟ್ಟು ಬಿಡಿ ಎಂದು ಬೇಡಿದ್ದಾಗಿ ಅಭಿಷೇಕ್ ವಿವರಿಸಿದ್ದಾನೆ.
ನನಗೆ ಬದುಕಲು ಆಸೆ ಇದೆ ಎಂದು ಹಲವು ಬಾರಿ ಅಭಿಷೇಕ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ ಹಿಂದೆಯೂ ಸಾಕಷ್ಟು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ವಿವರಿಸಿದ್ದಾನೆ.
ತನ್ನ ಫ್ಯಾಮಿಲಿ, ನನ್ನ ರೂಂ ಮೇಟ್ಸ್‌ಗಳನ್ನು ಮಿಸ್ ಮಾಡುತ್ತಿದ್ದೇನೆ ಎಂದಿದ್ದಾನೆ. ಪತ್ರದ ಕೊನೆಯಲ್ಲಿ ತಾನು ಈ ವಿಷಯವನ್ನು ಒಬ್ಬಳಲ್ಲಿ ಹೇಳಿದ್ದೆ. ಅವಳು ಪೊಲೀಸ್ ಕಂಪ್ಲೈಂಟ್ ಕೊಡಲೂ ಹೇಳಿದ್ದಳು. ಆದರೆ ನನಗೆ ಕಾನೂನಿನಲ್ಲಿ ನಂಬಿಕೆ ಇಲ್ಲ ಇವರಿಗೆ ಯಾವುದೇ ಶಿಕ್ಷೆ ಆಗುವುದಿಲ್ಲ, ಬೇರೆ ಆಪ್ಷನ್ ಇಲ್ಲದೆ ಜೀವಂತವಾಗಿದ್ದು ದಿನಾ ಸಾಯುವುದಕ್ಕಿಂತ ಒಮ್ಮೆಲೆ ಸಾಯುವುದು ಒಳ್ಳೆಯದು ಎಂದು ಅನಿಸುತ್ತದೆ ಸಾರಿ… ಎಂದು ಪತ್ರವನ್ನು ಮುಗಿಸಿದ್ದಾನೆ.
ಪತ್ರದಲ್ಲಿ ಆತನು “ನನಗೆ ಕಾನೂನಿನಲ್ಲಿ ನಂಬಿಕೆ ಇಲ್ಲ”, “ಇವರಿಗೆ ದೊಡ್ಡವರ ಪರಿಚಯವಿದೆ, ಶಿಕ್ಷೆ ಆಗುವುದಿಲ್ಲ” ಎಂದು ಹತಾಶೆ ವ್ಯಕ್ತಪಡಿಸಿದ್ದಾನೆ. ಕುಟುಂಬದವರಿಗೂ ಕ್ಷಮೆಯಾಚನೆ ಸಲ್ಲಿಸಿದ್ದು, ತನ್ನ ತಮ್ಮನ ಸುರಕ್ಷತೆಗೆ ಕಾಳಜಿ ವಹಿಸಲು ವಿನಂತಿಸಿದ್ದಾನೆ. ಡೆತ್‌ನೋಟ್‌ನಲ್ಲಿ ಉಲ್ಲೇಖಗೊಂಡಿದ್ದ ನಾಲ್ವರ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ.