ನವದೆಹಲಿ: ಕೆಮ್ಮಿನ ಸಿರಪ್ ಸೇವಿಸಿದ ಬಳಿಕ 23 ಮಕ್ಕಳ ಸಾವಿಗೆ ಸಂಬಂಧಿಸಿದ ತನಿಖೆಯ ನಡುವೆ, ದೇಶದ ಔಷಧಿ ಪರೀಕ್ಷಾ ವ್ಯವಸ್ಥೆಯ ನಿಜಸ್ಥಿತಿ ಹೇಗಿದೆ ಎನ್ನುವುದು ಬಹಿರಂಗಗೊಂಡಿದೆ. ಯಾಕೆಂದರೆ ಭಾರತ ಮಹಾಲೇಖಾಧಿಕಾರಿ (CAG) ಕಳೆದ ವರ್ಷವೇ ತಮಿಳುನಾಡಿನಲ್ಲಿ ಔಷಧಿ ಪರೀಕ್ಷೆಯ ತೀವ್ರ ಕೊರತೆ ಇದೆ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಅದು ಬಹಿರಂಗವಾಗಲು ಬರೋಬ್ಬರಿ 23 ಅಮಾಯಕ ಕಂದಮ್ಮಗಳು ಬಲಿಯಾಗಬೇಕಾಯಿತು.

ಮಕ್ಕಳ ಸಾವಿಗೆ ಕಾರಣವಾಗಿರುವುದು ತಮಿಳುನಾಡಿನ ಸ್ರೀಸನ್ ಫಾರ್ಮಾಸ್ಯೂಟಿಕಲ್ಸ್ ಕಂಪೆನಿಯ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಸೇವನೆ ಎನ್ನುವುದು ದೃಢವಾಗಿದೆ.
CAG ಡಿಸೆಂಬರ್ 10, 2024 ರಂದು ಮಂಡಿಸಿದ ವರದಿಯ ಪ್ರಕಾರ, 2016–17ರಲ್ಲಿ ತಮಿಳುನಾಡಿನಲ್ಲಿ ಒಟ್ಟು 1,00,800 ಪರಿಶೀಲನೆಗಳನ್ನು ನಡೆಸುವ ಗುರಿ ಇದ್ದು, ಕೇವಲ 66,331 ಪರಿಶೀಲನೆಗಳಷ್ಟೇ ನಡೆದಿದ್ದು, 34% ಪರಿಶೀಲನೆಯ ಕೊರತೆ ಇದೆ ಎಂದು ಎಚ್ಚರಿಕೆ ನೀಡಿತ್ತು. 2020–21ರಲ್ಲಿ ಈ ಕೊರತೆ 38%ಕ್ಕೆ ಏರಿತು. 2019–20ರಲ್ಲಿ ಅತಿ ಹೆಚ್ಚು 40% ಕೊರತೆ ದಾಖಲಾಗಿದೆ.
ಔಷಧಿ ಮಾದರಿ ಸಂಗ್ರಹಣೆಯಲ್ಲಿಯೂ ಗಂಭೀರ ಕೊರತೆ ಕಂಡುಬಂದಿದ್ದು, 2018–19 ಹಾಗೂ 2020–21ರಲ್ಲಿ ಗುರಿಯ ಹೋಲಿಕೆಗೆ 54% ಕಡಿಮೆ ಮಾದರಿಗಳನ್ನು ಮಾತ್ರ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಔಷಧಿ ಪರಿಶೀಲನೆಗಳು ಉತ್ಪಾದನೆಯ ಗುಣಮಟ್ಟ ಖಚಿತಪಡಿಸಲು ಅತ್ಯಗತ್ಯವಾಗಿದ್ದು, ಪರೀಕ್ಷೆಯ ಬಳಿಕವೇ ಔಷಧಿಗಳು ಮಾರುಕಟ್ಟೆ ತಲುಪುತ್ತವೆ.
ಆದರೆ, ಇತ್ತೀಚಿನ ತನಿಖೆಯಲ್ಲಿ ತಮಿಳುನಾಡು ಅಧಿಕಾರಿಗಳು ಕೋಲ್ಡ್ರಿಫ್ ಸಿರಪ್ನಲ್ಲಿ ಡೈಇಥಿಲೀನ್ ಗ್ಲೈಕಾಲ್ (DEG) ಎಂಬ ವಿಷಕಾರಿ ರಾಸಾಯನಿಕ ಅಂಶವನ್ನು ಪತ್ತೆಹಚ್ಚಿದ್ದಾರೆ. ಈ ಅಂಶವನ್ನು ಸಾಮಾನ್ಯವಾಗಿ ಮುದ್ರಣ ಮಸಿ ಹಾಗೂ ಅಂಟು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಮಾನವನ ಮೂತ್ರಪಿಂಡ, ಯಕೃತ್ ಹಾಗೂ ನರಮಂಡಲಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ.
ಕಂಚೀಪುರಂನಲ್ಲಿರುವ ಕಾರ್ಖಾನೆಯಲ್ಲಿ ನಡೆದ ತಪಾಸಣೆಯಲ್ಲಿ ಕಂಪೆನಿ 46–48% DEG ಬಳಕೆ ಮಾಡಿರುವುದು ಪತ್ತೆಯಾಗಿದೆ, ಇದು ಅನುಮತಿಸಲಾದ 0.1% ಮಿತಿಗಿಂತ ಬಹಳ ಅಧಿಕ.
ಈ ಹಿನ್ನೆಲೆಯಲ್ಲಿ ತಮಿಳುನಾಡು ಔಷಧ ನಿಯಂತ್ರಣ ಪ್ರಾಧಿಕಾರವು ಕಂಪೆನಿಯ ಉತ್ಪಾದನೆಯನ್ನು ನಿಲ್ಲಿಸುವ ಆದೇಶ ಹೊರಡಿಸಿದ್ದು, ಲೈಸೆನ್ಸ್ ಸ್ಥಗಿತಗೊಳಿಸಲಾಗಿದೆ. ಕಂಪೆನಿಯ ಮಾಲೀಕ ರಂಗನಾಥನ್ ಗೊವಿಂದನ್ ಬಂಧನಕ್ಕೊಳಗಾಗಿದ್ದಾನೆ.
ಇದೇ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಮಕ್ಕಳ ಸಾವಿಗೆ ತಮಿಳುನಾಡು ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. “ಈ ಸಾವುಗಳು ತಮಿಳುನಾಡಿನ ಕಾರ್ಖಾನೆಯಲ್ಲೇ ತಯಾರಾದ ಸಿರಪ್‌ನ ಗುಣಮಟ್ಟದ ದೋಷದಿಂದ ಸಂಭವಿಸಿದ್ದವು. ಸಮಯೋಚಿತ ಕ್ರಮ ಹಾಗೂ ಪರೀಕ್ಷೆ ಅಲ್ಲಿ ನಡೆದಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು,” ಎಂದು ಅವರು ಹೇಳಿದ್ದಾರೆ.