ಕಂಬಳೆಯಲ್ಲಿ ಗ್ಯಾಂಗ್‌ವಾರ್:‌ ಚೂರಿ ಕುತ್ತಿಗೆಯಲ್ಲೇ ಬಾಕಿ- ಸಾರ್ವಜನಿಕ ಹೊಡೆದಾಟದ ವಿಡಿಯೋ ವೈರಲ್

ಕಾಸರಗೋಡು: ಕುಂಬಳೆ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಗ್ರಾಮದಲ್ಲಿ ಯುವಕರು ಸಾರ್ವಜನಿಕವಾಗಿ ನಡುರಸ್ತೆಯಲ್ಲೇ ಗ್ಯಾಂಗ್‌ವಾರ್‌ ನಡೆಸಿ ಚೂರಿಯಿಂದ ಇರಿಯುತ್ತಿರುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ದೃಶ್ಯದಲ್ಲಿ ಚೂರಿ ಯುವಕನೊಬ್ಬನ ಕುತ್ತಿಗೆಯಲ್ಲಿಯೇ ಬಾಕಿಯಾಗಿರುವುದು ಕಂಡು ಬಂದಿದೆ.

ಗ್ಯಾಂಗ್‌ವಾರ್‌ನಲ್ಲಿ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಎಂಬಾತನ ಕುತ್ತಿಗೆಗೆ ಚಾಕು ಇರಿಯಲಾಗಿದ್ದು, ಚೂರಿ ಕುತ್ತಿಗೆಯಲ್ಲೇ ಬಾಕಿಯಾಗಿತ್ತು. ಕೊನೆಗೆ ಆತ ಚೂರಿ ಇರಿದ ಸ್ಥಿತಿಯಲ್ಲಿಯೇ ಆಸ್ಪತ್ರೆಗೆ ದಾಖಲಾಗಿರುವ ದೃಶ್ಯಗಳೂ ವೈರಲ್‌ ಆಗಿದೆ. ಸದ್ಯಕ್ಕೆ ಈತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಮೀನು ವ್ಯಾಪಾರಿಗಳ ಕೋಳಿಜಗಳ!
ಲಭಿಸಿರುವ ಮಾಹಿತಿಯ ಪ್ರಕಾರ, ಭಾನುವಾರ ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಮೀನು ವ್ಯಾಪಾರಿಗಳು ಹಣದ ವಿಚಾರದಲ್ಲಿ ಬದಿಯಡ್ಕ ಮತ್ತು ಸೀತಾಂಗೋಳಿಯ ಎರಡು ತಂಡಗಳ ಯುವಕರ ನಡುವೆ ಕಿರಿಕ್‌ ಉಂಟಾಗಿ ಸಾರ್ವಜನಿಕವಾಗಿಯೇ ಕಿತ್ತಾಟ ನಡೆಸಿದ್ದಾರೆ. ಈ ವೇಳೆ ಬದಿಯಡ್ಕದ ತಂಡದ ಯುವಕರು ಕಾರು ಮತ್ತು ಜೀಪಿನಲ್ಲಿ ಸ್ಥಳಕ್ಕೆ ರಸ್ತೆ ಬದಿ ನಿಂತಿದ್ದ ಜನರ ಮೇಲೆಯೇ ಕಾರು ಹರಿಸಲು ಯತ್ನಿಸುತ್ತಿದ್ದಾರೆ.

ಕೋಳಿಯ ಕಾಲಿಗೆ ಬಾಲು(ಕತ್ತಿ) ಕಟ್ಟಿಕೊಂಡ ರೀತಿಯಲ್ಲಿಯೇ ಯುವಕರು ಚೂರಿ ಹಿಡಿದು ಗಲಾಟೆ ನಡೆಸಿದ್ದು, ಒಬ್ಬಾತನ ದೇಹ ರಕ್ತದಿಂದ ತೇವಗೊಂಡಿತ್ತು. ಅಷ್ಟರಲ್ಲಿ
ಸ್ಥಳಕ್ಕೆ ಬಂದ ಪೊಲೀಸ್ ಜೀಪು ಬಂದಿದ್ದರಿಂದ ದುಷ್ಕರ್ಮಿಗಳ ಗ್ಯಾಂಗ್‌ವಾರ್‌ಗೆ ಮಂಗಳ ಹಾಕಿ ಪರಾರಿಯಾಗಿದ್ದಾರೆ. ಪೊಲೀಸರು ಬರುವುದು ಕೊಂಚ ಲೇಟಾಗುತ್ತಿದ್ದರೂ ಯಾರಾದರೊಬ್ಬರ ಪ್ರಾಣ ಹೋಗುವ ಸಂಭವವಿತ್ತು ಎಂದು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬದಿಯಡ್ಕದಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದವರಿಂದಲೇ ಕೋಳಿ ಜಗಳ ನಡೆದಿದೆ ಎಂದು ತಿಳಿದುಬಂದಿದೆ. ಕುಂಬಳೆ ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು, ಕಾರುಗಳನ್ನು ಜಪ್ತಿ ಮಾಡಿದ್ದು ತನಿಖೆ ಮುಂದುವರಿದೆ.

 

error: Content is protected !!