ತಲವಾರು ಝಳಪಿಸಿ ದನ ಕಳವು – ಮೂವರು ಆರೋಪಿಗಳ ಬಂಧನ

ಕಾರ್ಕಳ: ಅಜೆಕಾರು ಬಳಿಯ ಶಿರ್ಲಾಲು ಗ್ರಾಮದಲ್ಲಿ ತಡರಾತ್ರಿ ಮನೆ ಮಂದಿಯ ಮುಂದೆ ತಲವಾರು ಝಳಪಿಸಿ ಬೆದರಿಸಿ, ಕೊಟ್ಟಿಗೆಯಲ್ಲಿದ್ದ ಮೂರು ದನಗಳನ್ನು ಕಳವುಗೈದ ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆಯ ಯೂನಿಸ್ (31), ಮೂಡುಬಿದಿರೆ ಕಲ್ಲಬೆಟ್ಡುವಿನ ನಾಸೀರ್ (28) ಹಾಗೂ ಮೂಡುಬಿದಿರೆ ಪುತ್ತಿಗೆ ಗ್ರಾಮದ ಮಿಜಾರಿನ ಇಕ್ಬಾಲ್ (29) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ತಲವಾರುಗಳು, ಕಾರು, ಬೋಲೆರೋ ವಾಹನ, ಐದು ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು ₹5,87,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆಪ್ಟೆಂಬರ್‌ 28ರಂದು ರಾತ್ರಿ 2.15ರ ಸುಮಾರಿಗೆ ಜಯಶ್ರೀ ಎಂಬುವವರ ಮನೆಯ ದನದ ಕೊಟ್ಟಿಗೆಗೆ ಮೂವರು ಅಪರಿಚಿತರು ತಲವಾರುಗಳೊಂದಿಗೆ ನುಗ್ಗಿ, ಕುಟುಂಬದವರನ್ನು ಬೆದರಿಸಿ, ಸುಮಾರು ₹35,000 ಮೌಲ್ಯದ ಮೂರು ಹಸುಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಮಂಜಪ್ಪ ಡಿ.ಆರ್ ಹಾಗೂ ಅಜೆಕಾರು ಠಾಣಾ ಎಸ್‌ಐ ಮಹೇಶ್ ಟಿ.ಎಂ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ತಂಡವು ಸೂಕ್ಷ್ಮ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಪೊಲೀಸರು ಕೃತ್ಯದಲ್ಲಿ ಬಳಸಿದ ವಾಹನ ಹಾಗೂ ಆಯುಧಗಳ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

error: Content is protected !!