ಕೊಲಂಬೊ: ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವನಿತೆಯರು ಎದುರಾಳಿ ತಂಡ ಪಾಕಿಸ್ತಾನವನ್ನು 88 ರನ್ ಗಳ ಭಾರಿ ಅಂತರದಿಂದ ಜಯಿಸಿದರು. ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ಪಾಕ್‌ಗೆ 248 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಎದುರಾಳಿ ತಂಡ 43 ಓವರ್‌ಗಳಲ್ಲಿ 159 ರನ್ ಗಳಿಸಿ ಆಲೌಟ್ ಆಯಿತು. ಪಂದ್ಯದ ಗೆಲುವಿನ ಮೂಲಕ ಎದುರಾಳಿ ತಂಡದ ವಿರುದ್ಧದ ಅಜೇಯ ದಾಖಲೆಯನ್ನು ಭಾರತ 12-0 ಗೆ ಉತ್ತಮಪಡಿಸಿಕೊಂಡಿತು.
ನಿಧಾನ ಗತಿಯ ಪಿಚ್ ನಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಿಯೋಲ್ ಅವರ 46 ಹಾಗೂ ರಿಚಾ ಘೋಷ್ ಅವರ ಸ್ಫೋಟಕ ಬ್ಯಾಟಿಂಗ್ (20 ಎಸೆತಗಳಲ್ಲಿ 35) ನೆರವಿನಿಂದ ಭಾರತ 247 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ವೇಗದ ಬೌಲರ್ ಕ್ರಾಂತಿ ಗೌಡ್ (3/20) ಪಾಕಿಸ್ತಾನದ ಅಗ್ರ ಬ್ಯಾಟಿಂಗ್ ಕ್ರಮಾಂಕವನ್ನು ಮುರಿದರೆ, ಮಧ್ಯ ಹಾಗೂ ಕೊನೆಯ ಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ಸ್ಪಿನ್ನರ್ ಗಳು ಯಶಸ್ವಿಯಾದರು. ಅಂತಿಮವಾಗಿ ಸಿದ್ರಾ ಅಮೀಮ್ (106 ಎಸೆತಗಳಲ್ಲಿ 81) ದಿಟ್ಟ ಹೋರಾಟದ ಹೊರತಾಗಿಯೂ ಪಾಕಿಸ್ತಾನ ತಂಡ 159 ರನ್ ಗಳಿಗೆ ಆಲೌಟ್ ಆಯಿತು.