ನೀಲೇಶ್ವರ (ಕಾಸರಗೋಡು): ಕಿನನೂರು-ಕರಿಂತಲಂ ಪಂಚಾಯತ್ ವ್ಯಾಪ್ತಿಯ ಕುಂಬಳಪಳ್ಳಿಯಲ್ಲಿ, ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ವಯೋವೃದ್ಧ ಮಾವನನ್ನೇ ಥಳಿಸಿ ಕೊಂದ ದಾರುಣ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಕೆಲವು ದಿನಗಳ ಹಿಂದೆ ಆರೋಪಿ ಮನೆಯ ಟೆರೇಸ್ ಹತ್ತಿ ಪರೋಟಾ, ಬೀಪ್ ಗಸಿ ಕೊಡದಿದ್ದರೆ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದ ಎಂದು ತಿಳಿದುಬಂದಿದೆ.

ಕುಂಬಳಪಳ್ಳಿಯ ಚಿತ್ತಮೂಲ ಉನ್ನತಿ ಮೂಲದ ನಿವಾಸಿ ಕೆ. ಕಣ್ಣನ್ (80) ಕೊಲೆಗೀಡಾದ ವ್ಯಕ್ತಿ. ಇವರ ಸೋದರಳಿಯ, ನೆರೆಮನೆಯ ಆರೋಪಿ ಕೆ. ಶ್ರೀಧರನ್ (45) ಅವರನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಪೊಲೀಸರ ಪ್ರಕಾರ, ಭಾನುವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಕಣ್ಣನ್ ಮನೆಯಲ್ಲಿದ್ದಾಗ ಶ್ರೀಧರನ್ ಅವರಿಗೆ ಕೋಲಿನಿಂದ ಹಿಂಭಾಗದಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಕಣ್ಣನ್ ಹಾಗೂ ಅವರ ಪತ್ನಿ ಪುತರಿಚಿ ಮಾತ್ರ ಮನೆಯಲ್ಲಿ ಇದ್ದರು. ತಲೆಯ ಹಿಂಭಾಗಕ್ಕೆ ಬಿದ್ದ ಗಾಯ ಸಣ್ಣದೆಂದು ಭಾವಿಸಿ, ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿರಲಿಲ್ಲ.
ಆದರೆ ಒಂದು ಗಂಟೆಗೂ ಹೆಚ್ಚು ಸಮಯದ ನಂತರ ಮನೆಗೆ ಬಂದ ಮತ್ತೊಬ್ಬ ಸಂಬಂಧಿ ಗಾಯದ ಗಂಭೀರತೆಯನ್ನು ಗಮನಿಸಿ ಕಣ್ಣನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ ದಾರಿಯಲ್ಲಿಯೇ ಕಣ್ಣನ್ ಪ್ರಾಣ ಕಳೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ಆತ್ಮಹತ್ಯೆ ಬೆದರಿಕೆ
ದಾಳಿಯ ಬಳಿಕ ಶ್ರೀಧರನ್ ಆತಂಕಗೊಂಡು ತೆಂಗಿನ ಮರ ಹತ್ತಿ, ಪಕ್ಕದ ಮನೆಯ ಟೆರೇಸ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಆತನನ್ನು ಶಾಂತಗೊಳಿಸಿ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿ ವಶಕ್ಕೆ ಪಡೆದರು. ನೀಲೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಿಬಿನ್ ಜಾಯ್ ಅವರ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಪ್ರಾರಂಭಿಸಿದೆ.
ಪರೋಟ ಗೋಮಾಂಸ ಕೊಡದಿದ್ದರೆ ಆತ್ಮಹತ್ಯೆ ಮಾಡುತ್ತೇನೆ.
ಆರೋಪಿ ಶ್ರೀಧರನ್ ಹಲವು ತಿಂಗಳಿನಿಂದ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚಿನ ಘಟನೆಯಷ್ಟೇ ಅಲ್ಲ, ಈ ವರ್ಷದ ಏಪ್ರಿಲ್ 6 ರಂದು ಕೂಡಾ ಅವರು ನೆರೆಯವರ ಮನೆಯ ಟೆರೇಸ್‌ಗೆ ಹತ್ತಿ, “ಪರೋಟಾ ಮತ್ತು ಗೋಮಾಂಸ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಸಿದ್ದನು.
ಆ ಸಂದರ್ಭದಲ್ಲಿ ನಿವಾಸಿಗಳು ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿಯನ್ನು ಕರೆಸಿ, ಅಧಿಕಾರಿಗಳು ಆತನನ್ನು ಶಾಂತಗೊಳಿಸಿ ಕೆಳಗಿಳಿಸಲು ಯಶಸ್ವಿಯಾದರು, ಆದರೆ ಆತನ ಬೇಡಿಕೆಯಾಗಿದ್ದ ಪರೋಟಾ ಹಾಗೂ ಗೋಮಾಂಸ ನೀಡಿಯೇ ಆತನನ್ನು ಕೆಳಗಿಳಿಸಲಾಗಿತ್ತು.
ನೆರೆಹೊರೆಯವರು ಹೇಳುವಂತೆ, ಶ್ರೀಧರನ್ ಆಗಾಗ್ಗೆ ತೆಂಗಿನ ಮರ ಹತ್ತಿ ಪಕ್ಕದ ಮನೆಗಳ ಟೆರೇಸ್‌ಗಳಿಗೆ ಹಾರುತ್ತಿದ್ದನು. ಈ ನಡವಳಿಕೆಯನ್ನು ಜನರು “ವಿಲಕ್ಷಣ ಆದರೆ ಅಪಾಯಕಾರಿಯಲ್ಲದ” ಎಂದೇ ಪರಿಗಣಿಸುತ್ತಿದ್ದರು.
ಭಾನುವಾರದ ದಾಳಿಯ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಸ್ಥಳದಲ್ಲಿ ಫರೆನ್ಸಿಕ್ ಹಾಗೂ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯುತ್ತಿದೆ. ಮೃತ ಕಣ್ಣನ್ ತಮ್ಮ ಪತ್ನಿ ಹಾಗೂ ಪುತ್ರರಾದ ಶಶಿ, ಚಂದ್ರನ್ ಮತ್ತು ಜಯನ್ ಅವರನ್ನು ಅಗಲಿದ್ದಾರೆ.