ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿನ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳ ಸಾಗಾಟದ ವಿಚಾರವಾಗಿ ಎಸ್‌ಐಟಿ ಈಗಾಗಲೇ ಬೆಳ್ತಂಗಡಿಯ ಇಬ್ಬರು ಆ್ಯಂಬುಲೆನ್ಸ್ ವಾಹನ ಚಾಲಕರನ್ನು ಒಂದು ಹಂತದ ವಿಚಾರಣೆ ನಡೆಸಿದ್ದು, ಭಾನುವಾರ ರಜಾ ದಿನವಾದ ಕಾರಣ ಯಾವುದೇ ಚಟುವಟಿಕೆಗಳು ನಡೆಯದೇ ಇದ್ದು, ಇಂದು(ಅ.6) ಮತ್ತೆ ವಿಚಾರಣೆಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳ್ತಂಗಡಿಯಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಆ್ಯಂಬುಲೆನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಲೀಲ್ ಹಾಗೂ ಹಮೀದ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಅ. 4ರಂದು ರಾತ್ರಿ 9ರ ವರೆಗೆ ವಿಚಾರಣೆ ನಡೆಸಿದ್ದು, ಒಂದಷ್ಟು ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕುವ ಕಾರ್ಯ ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಮತ್ತೆ ಹಾಜರಾಗುವಂತೆ ಹೇಳಿರುವುದಾಗಿ ಮೂಲಗಳು ತಿಳಿಸಿದೆ.
ಧರ್ಮಸ್ಥಳದಿಂದ ಮೃತದೇಹಗಳನ್ನು ಸಾಗಾಟ ಮಾಡಿರುವ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಆ್ಯಂಬುಲೆನ್ಸ್ ಚಾಲಕರು ನಾವು ಪೊಲೀಸ್ ಮಾಹಿತಿಯಂತೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಾಟ ಮಾಡಿದ್ದು, ಪೊಲೀಸ್ ಮಹಜರಿನ ಕುರಿತು ದಾಖಲೆಗಳಿವೆ. ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೆಚ್ಚಿನ ಮೃತದೇಹಗಳನ್ನು ಸಾಗಾಟ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡವರು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವರು, ಅನಾಥ ಶವಗಳನ್ನು ಸಾಗಾಟ ಮಾಡಿದ್ದೇವೆ ಎಂದು ಎಸ್‌ಐಟಿ ಅಧಿಕಾರಿಗಳಿಗೆ ವಿವರಿಸಿರುವುದಾಗಿ ಅವರು ಹೇಳಿದ್ದಾರೆ.
ಆದರೆ ಅವರ ಮುಂದಿನ ಹಂತದ ವಿಚಾರಣೆ ಯಾವ ರೀತಿ ನಡೆಯಲಿದೆ ಎಂಬುದು ತಿಳಿದುಬಂದಿಲ್ಲ. ಜತೆಗೆ ಮುಂದಿನ ದಿನಗಳಲ್ಲಿ ಇನ್ನೂ ಒಂದಷ್ಟು ಮಂದಿಯ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ವಿಚಾರಣೆಯ ನೋಟಿಸ್ ನೀಡಲ್ಪಟ್ಟಿರುವ ಐದಾರು ಮಂದಿ ಯುಟ್ಯೂಬರ್‌ಗಳು ವಿಚಾರಣೆಗೆ ಹಾಜರಾಗಲಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಮುಂದೆ ಅವರು ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಒಂದು ವೇಳೆ ವಿಚಾರಣೆಗೆ ಬಾರದೇ ಇದ್ದರೆ ಎಸ್‌ಐಟಿಯ ಮುಂದಿನ ನಡೆ ಏನು ಎಂಬುದು ಕುತೂಹಲದ ವಿಚಾರವಾಗಿದೆ.