ಬೆಂಗಳೂರು: ಕೊತ್ತನೂರು ಬಳಿಯ ದೊಡ್ಡಗುಬ್ಬಿಯ ಶ್ರೀಧರ್ ಅವರಿಗೆ ಸೇರಿದ ಸಮೃದ್ಧಿ ಅಪಾರ್ಟ್‌ಮೆಂಟ್‌ನ ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಭಯಾನಕ ಅಸ್ಥಿಪಂಜರ ಪತ್ತೆಯಾಗಿದೆ. ಸುಮಾರು 6 ರಿಂದ 8 ತಿಂಗಳ ಹಿಂದೆ ಮೃತಪಟ್ಟ 35-40 ವರ್ಷ ವಯಸ್ಸಿನ ಗಂಡಸಿನ ಅಸ್ಥಿಪಂಜರವೆಂದು ತಿಳಿದುಬಂದಿದೆ. ಶುಕ್ರವಾರ(ಅ.3) ಕಟ್ಟಡದ ಕಾರ್ಮಿಕರ ಕಣ್ಣಿಗೆ ಈ ಅಸ್ಥಿಪಂಜರ ಬಿದ್ದಿದ್ದು, ಸೆಕ್ಯುರಿಟಿ ಗಾರ್ಡ್ ತಕ್ಷಣ ಕೊತ್ತನೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದು, ಅಸ್ಥಿಪಂಜರವನ್ನು ಫೋರೆನ್‌ಸಿಕ್ ಸೈನ್ಸ್ ಲ್ಯಾಬ್ (ಎಫ್‌ಎಸ್‌ಎಲ್)ಗೆ ರವಾನೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಕಾರ್ಮಿಕರು ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅಸ್ಥಿಪಂಜರ ಕಂಡುಬಂದಿದೆ. ಮೇಲ್ನೋಟಕ್ಕೆ, ಇದು 35 ರಿಂದ 40 ವರ್ಷ ವಯಸ್ಸಿನ ಗಂಡಸಿನ ಮೃತದೇಹದ ಅವಶೇಷವೆಂದು ತೋರುತ್ತದೆ. ಅಸ್ಥಿಪಂಜರವು ಪ್ಯಾಂಟ್ ಮತ್ತು ಶರ್ಟ್ ಧರಿಸಿದ ಸ್ಥಿತಿಯಲ್ಲಿ, ಮಲಗಿದಂತೆಯೇ ಪತ್ತೆಯಾಗಿದೆ. 6 ರಿಂದ 8 ತಿಂಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ತಜ್ಞರು ಊಹಿಸಿದ್ದಾರೆ. ಈ ಘಟನೆಯಿಂದ ಕಾರ್ಮಿಕರು ಮತ್ತು ಸೆಕ್ಯುರಿಟಿ ಗಾರ್ಡ್ ಶಾಕ್‌ಗೆ ಒಳಗಾಗಿದ್ದಾರೆ, ಮತ್ತು ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.