ಮಂಗಳೂರು: ನಗರದಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದಿದ್ದ ಚಿನ್ನದ ಗಟ್ಟಿ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಕೋಟೆಕಾರು ನಿವಾಸಿ ಫಾರಿಶ್(18), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಸಫ್ವಾನ್(23), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲ ದರ್ಗಾ ಸಮೀಪದ ನಿವಾಸಿ ಫರಾಝ್(19), ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಒಬ್ಬ ಬಾಲಕನನ್ನು ಸೆರೆಹಿಡಿದಿದ್ದಾರೆ.
ಘಟನೆಯ ವಿವರ: ಸೆಪ್ಟೆಂಬರ್ 26ರಂದು ರಾತ್ರಿ 8.45ರ ಸುಮಾರಿಗೆ ಚಾಯ್ಸ್ ಗೋಲ್ಡ್ ಅಂಗಡಿಯ ಕೆಲಸಗಾರ ಮುಸ್ತಾಫ ಅವರು ಚಿನ್ನದ ಗಟ್ಟಿಯನ್ನು ಸ್ಕೂಟರ್‌ನ ಸೀಟಿನ ಅಡಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದರು. ಆಗ ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಪೈಕಿ ಇಬ್ಬರು ಆರೋಪಿಗಳು ಸ್ಕೂಟರಿನಲ್ಲಿ ಬಂದು ಮುಸ್ತಾಫ ಅವರನ್ನು ತಡೆದು ನಿಲ್ಲಿಸಿದರೆ, ಉಳಿದವರು ಕಾರಿನಲ್ಲಿ ಬಂದು ಅವರನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಹೋಗಿ ಹಲ್ಲೆ ನಡೆಸಿ, ಎಕ್ಕೂರು ಬಳಿ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಠಾಣೆಯಲ್ಲಿ ಅ.ಕ್ರ. 111/2025, ಕಲಂ 137(2), 310(2) BNS-2023ರಂತೆ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಲಾಗಿತ್ತು.
ಚಿನ್ನದ ಗಟ್ಟಿ ಸಾಗಿಸುತ್ತಿದುದು ಗೊತ್ತಾಗಿದ್ದು ಹೇಗೆ?
ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕನು ಮುಸ್ತಾಫ ಅವರ ಚಲನವಲನದ ಮಾಹಿತಿ ಆರೋಪಿಗೆ ನೀಡಿದ್ದನು. ಆ ಮಾಹಿತಿಯ ಆಧಾರದ ಮೇಲೆ ಫಾರಿಶ್ ಮತ್ತು ಇತರ ಆರೋಪಿಗಳು ಪೂರ್ವಯೋಜಿತ ಸಂಚು ರೂಪಿಸಿ ದರೋಡೆ ನಡೆಸಿದ್ದರು. ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸೆಸ್ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ದರೋಡೆಯಲ್ಲಿ ಬಳಸಿದ ಕಾರು ಹಾಗೂ ಚಿನ್ನದ ಗಟ್ಟಿಯನ್ನು ಇನ್ನೂ ಪತ್ತೆಹಚ್ಚಬೇಕಾಗಿದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು, ಸಹಾಯಕ ಪೊಲೀಸ್ ಆಯುಕ್ತರು (ಕೇಂದ್ರ ಉಪವಿಭಾಗ ಹಾಗೂ ಸಿಸಿಬಿ ಘಟಕ) ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಠಾಣೆ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಜಂಟಿಯಾಗಿ ಯಶಸ್ವಿಯಾಗಿ ನಡೆಸಿದ್ದಾರೆ.