‘ಐ ಲವ್ ಮುಹಮ್ಮದ್’ ಅಭಿಯಾನ ಬೆಂಬಲಿಸಿ ಕರೆ ನೀಡಿದ್ದ ತೌಕೀರ್ ರಜಾ ಬಂಧನ

ಬರೇಲಿ: ‘ಐ ಲವ್ ಮುಹಮ್ಮದ್’ ಅಭಿಯಾನವನ್ನು ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಸ್ಥಳೀಯ ಧರ್ಮಗುರು ತೌಕೀರ್ ರಜಾ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ರಜಾ ಅವರು ಅಭಿಯಾನ ಬೆಂಬಲಿಸಿ ವೀಡಿಯೊ ಸಂದೇಶ ಹಂಚಿಕೊಂಡ ನಂತರ, ಅವರ ನಿವಾಸದ ಹೊರಗೆ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆಯನ್ನು ಮನಗಂಡ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರದ ಜುಮಾ ನಮಾಜ್ ನಂತರ ಬರೇಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಭಿಯಾನ ಬೆಂಬಲಿಸಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮವಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು. ಈ ಘಟನೆದಲ್ಲಿ 10ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರಗಳ ಹಿಂದೆ ಪೋಸ್ಟರ್ ಘಟನೆಯಿಂದ ಪ್ರಾರಂಭವಾದ ಘರ್ಷಣೆಗಳ ಸರಣಿಯಲ್ಲಿಯೇ ಇದು ಉಗ್ರ ಸ್ವರೂಪದ್ದು ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೀಡಿಯೊಗಳಲ್ಲಿ, ರಜಾ ಅವರ ಮನೆಯ ಹೊರಗೆ ‘ಐ ಲವ್ ಮುಹಮ್ಮದ್’ ಎಂದು ಬರೆದ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಿರುವ ಜನಸಮೂಹದ ದೃಶ್ಯಗಳು ದಾಖಲಾಗಿವೆ.

ಬರೇಲಿ ಘಟನೆಯಲ್ಲಿ ಭಾಗಿಯಾಗಿದ್ದ ಎಂಟು ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, 50 ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, 1,700 ಅಪರಿಚಿತ ವ್ಯಕ್ತಿಗಳ ವಿರುದ್ಧ ಗಲಭೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ, ಸಾಮಾನ್ಯ ಸ್ಥಿತಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉನ್ನತಾಧಿಕಾರಿಗಳು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

error: Content is protected !!