ಪುತ್ತೂರು: ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ಇಂದು(ಸೆ.23) ಬೆಳಗ್ಗೆ ನಡೆದಿದೆ.
ಸಂಪ್ಯ ನಿವಾಸಿ ಅಬ್ದುಲ್ ರಹಿಮಾನ್ (58) ಗಾಯಗೊಂಡ ಪಾದಚಾರಿ.
ಅಬ್ದುಲ್ ರಹಿಮಾನ್ ಅವರು ಸಂಪ್ಯ ಮಸೀದಿಯ ಮುಂಭಾಗದಲ್ಲಿ ತನ್ನ ಸ್ಕೂಟರ್ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ರಹಿಮಾನ್ ಅವರನ್ನು ಸಂಪ್ಯದ ಮೆಡ್ ಲ್ಯಾಂಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ