ಮುಂಬೈ: ಕತ್ರಿನಾ ಕೈಫ್ ಸಂತಾನ ಭಾಗ್ಯಕ್ಕಾಗಿ ಕೆಲ ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಂತಾನಭಾಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ ಸುದ್ದಿಗಳು ಪ್ರಸಾರಗೊಂಡಿದ್ದು, ದೇವರ ಅನುಗ್ರಹ ಭಾಗ್ಯ ಎಂಬಂತೆ ಈಗ ಅವರು ಗರ್ಭಿಣಿಯಾಗಿರುವ ಸುದ್ದಿ ಹೊರಬಂದಿದೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ದಂಪತಿ ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂದು ವಾರಗಳಿಂದ ಹರಿದಾಡುತ್ತಿದ್ದ ವದಂತಿಗೆ ಈಗ ಅಧಿಕೃತ ದೃಢೀಕರಣ ದೊರೆತಿದೆ.
ಸ್ವತಃ ಕತ್ರಿನಾ ಕೈಫ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಕ್ಕಿ ಕೌಶಲ್ ಜೊತೆಗಿನ ಚಿತ್ರವನ್ನು ಹಂಚಿಕೊಂಡು, “ನಮ್ಮ ಜೀವನದ ಅತ್ಯುತ್ತಮ ಅಧ್ಯಾಯದ ಆರಂಭದಲ್ಲಿ ನಾವಿದ್ದೇವೆ. ಈ ಸಮಯದಲ್ಲಿ ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ” ಎಂದು ಬರೆದು ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕತ್ರಿನಾ–ವಿಕ್ಕಿ ದಂಪತಿ 2021ರಲ್ಲಿ ಮದುವೆಯಾಗಿದ್ದರು. ಕತ್ರಿನಾ ಕೈಫ್ ವಿಕ್ಕಿ ಕೌಶಲ್‌ಗಿಂತ ಏಳು ವರ್ಷ ಹಿರಿದಾದರೂ, ಇಬ್ಬರೂ ವಯಸ್ಸಿನ ಅಂತರವನ್ನು ಲೆಕ್ಕಿಸದೇ ವೈವಾಹಿಕ ಜೀವನ ಆರಂಭಿಸಿದ್ದರು. ನಾಲ್ಕು ವರ್ಷದ ಬಳಿಕ ಇದೀಗ ಕುಟುಂಬದಲ್ಲಿ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ.
ಕತ್ರಿನಾ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ನಟಿ ಮೃಣಾಲ್ ಠಾಕೂರ್, ನೇಹಾ ದೂಪಿಯಾ, ಸೋನಂ ಕಪೂರ್, ರಕುಲ್ ಪ್ರೀತ್ ಸಿಂಗ್, ಜಾನ್ಹವಿ ಕಪೂರ್, ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಶುಭಾಶಯಗಳನ್ನು ಕೋರಿ ಪ್ರತಿಕ್ರಿಯಿಸಿದ್ದಾರೆ.
2021ರಲ್ಲಿ ಮದುವೆಯಾದ ಬಳಿಕವೂ ಕತ್ರಿನಾ ಕೈಫ್ ಸಿನಿರಂಗದಲ್ಲಿ ಸಕ್ರಿಯರಾಗಿದ್ದರು. 2024ರಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿದ ಮೇರಿ ಕ್ರಿಸ್ಮಸ್ ಅವರ ಕೊನೆಯ ಸಿನಿಮಾ ಆಗಿದ್ದು, ನಂತರದಿಂದ ಸಿನಿಮಾರಂಗದಿಂದ ದೂರ ಉಳಿದಿದ್ದರು. ಈಗ ಗರ್ಭಧಾರಣೆಯ ಹಿನ್ನೆಲೆಯಲ್ಲಿ ಇನ್ನೂ ಕೆಲವು ಕಾಲ ಸಿನಿರಂಗದಿಂದ ದೂರವಿರುವ ಸಾಧ್ಯತೆ ಇದೆ.