ಕೇರಳ: ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ಮಾಪಕರುಗಳಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರುಗಳ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದಾರೆ. ಇವರು ಮಲಯಾಳಂ ಚಿತ್ರರಂಗ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ, ನಿರ್ಮಾಪಕರಾಗಿದ್ದರು. ಈ ಇಬ್ಬರೂ ನಟರ ವಿರುದ್ಧ ಸ್ಮಗ್ಲಿಂಗ್ ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಮನೆಯಲ್ಲಿರುವ ಕಾರುಗಳು, ಇತರೆ ವಿದೇಶಿ ವಸ್ತುಗಳ ಬಗ್ಗೆ ತನಿಖೆ ನಡೆಸಿ ಮಾಹಿತಿ ಪಡೆದಿದ್ದಾರೆ.
ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಇಬ್ಬರೂ ಸಹ ಬಹಳ ಕಾರ್ ಕ್ರೇಜ್ ಹೊಂದಿರುವ ನಟರು. ತಮ್ಮ ಸಂಗ್ರಹದಲ್ಲಿ ಹಲವಾರು ಐಶಾರಾಮಿ ವಿದೇಶಿ ಬ್ರ್ಯಾಂಡ್ನ ಕಾರುಗಳನ್ನು ಹೊಂದಿದ್ದಾರೆ. ಕೆಲ ಲಿಮಿಟೆಡ್ ಎಡಿಷನ್ ಕಾರುಗಳನ್ನು ಈ ನಟರುಗಳು ವಿದೇಶಗಳಿಂದಲೂ ತರಿಸಿಕೊಂಡಿದ್ದಾರೆ. ಹಾಗಾಗಿ ಇದೀಗ ಕಸ್ಟಮ್ಸ್ ಅಧಿಕಾರಿಗಳು ಆ ಕಾರುಗಳ ದಾಖಲೆಗಳನ್ನು ಪರಿಶೀಲಿಸಿದ್ದು, ತೆರಿಗೆ, ನೊಂದಣಿ ಇತ್ಯಾದಿ ಮಾಹಿತಿಯನ್ನು ಪಡೆದಿದ್ದಾರೆ.
ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಪೃಥ್ವಿರಾಜ್ ಅವರ ತಿರುವನಂತಪುರಂನ ಮನೆ ಮೇಲೂ ದಾಳಿ ಮಾಡಿದ್ದಾರೆ. ಆದರೆ ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲವಂತೆ. ನಟರುಗಳು ಮಾತ್ರವೇ ಅಲ್ಲದೆ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಗೆ ‘ನುಮ್ಕೂರ್’ ಎಂದು ಹೆಸರಿಡಲಾಗಿದೆ. ವಾಹನಗಳನ್ನು ಮಲಯಾಳಿ ಭಾಷೆಯಲ್ಲಿ ನುಮ್ಕೂರ್ ಎನ್ನಲಾಗುತ್ತದೆಯಂತೆ. ಅಕ್ರಮವಾಗಿ ವಿದೇಶಗಳಿಂದ ವಾಹನ ಆಮದು ಮಾಡಿಕೊಳ್ಳುವುದು, ತೆರಿಗೆ ವಂಚನೆಗಳನ್ನು ಪತ್ತೆ ಹಚ್ಚವುದು ದಾಳಿಯ ಉದ್ದೇಶ.
ದುಲ್ಕರ್ ಸಲ್ಮಾನ್ ಬಳಿ ಹಲವಾರು ಕಾರುಗಳಿವೆ. ಅವರೇ ಹೇಳಿಕೊಂಡಿರುವಂತೆ ಸುಮಾರು 40ಕ್ಕೂ ಹೆಚ್ಚು ಕಾರುಗಳು ದುಲ್ಕರ್ ಬಳಿ ಇವೆ. ಬಿಎಂಡಬ್ಲು ಒಂದೇ ಬ್ರ್ಯಾಂಡ್ನ ಸುಮಾರು 10ಕ್ಕೂ ಹೆಚ್ಚು ಕಾರುಗಳು ದುಲ್ಕರ್ ಸಲ್ಮಾನ್ ಬಳಿ ಇವೆ. ಎಲ್ಲ ರೀತಿಯ ಎಸ್ಯುವಿ ಕಾರುಗಳು, ಹಲವಾರು ಪಿಕಪ್ ಟ್ರಕ್ಗಳು, ಸೂಪರ್ ಕಾರುಗಳು ದುಲ್ಕರ್ ಸಂಗ್ರಹದಲ್ಲಿವೆ. ಪೃಥ್ವಿರಾಜ್ ಸುಕುಮಾರನ್ ಸಹ ಹಲವಾರು ವಿದೇಶಿ ಕಾರುಗಳನ್ನು ಹೊಂದಿದ್ದಾರೆ. ಅವರ ಸಂಗ್ರಹದಲ್ಲಿ ಆಸ್ಟಿನ್ ಮಾರ್ಟಿನ್ ಕಾರು ಸಹ ಇದೆ. ಹಲವು ಸ್ಪೋರ್ಟ್ಸ್ ಕಾರುಗಳನ್ನು ಪೃಥ್ವಿರಾಜ್ ಸುಕುಮಾರನ್ ಹೊಂದಿದ್ದಾರೆ.