ಮಂಗಳೂರು: ಸುರತ್ಕಲ್ ನಗರದ ಕಾನಾ ಮಾಹಿ ಹೋಟೆಲ್ ಬಳಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದ ಮಗುವಿನ ಪೋಷಕರನ್ನು ಪೊಲೀಸರು ಕೆಲವೇ ಕ್ಷಣಗಳಲ್ಲಿ ಪತ್ತೆಹಚ್ಚಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಸುರತ್ಕಲ್ ಬೀಟ್ ಪೊಲೀಸರಿಗೆ ಕಾನಾ ಮಾಹಿ ಹೋಟೆಲ್ ಬಳಿ ಒಂಟಿ ಮಗು ಸಿಕ್ಕಿತ್ತು. ಮಗುವನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗಲೂ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿರಲಿಲ್ಲ.
ಕೊನೆಗೆ ಈ ಬಗ್ಗೆ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಶೇರ್ ಮಾಡಿ ಪೋಷಕರ ಪತ್ತೆಗೆ ಮನವಿ ಮಾಡಿದ್ದರು. ಕೊನೆಗೆ ಮಗುವಿನ ಪೋಷಕರು ಪತ್ತೆಯಾಗಿದ್ದು, ಅವರು ಕೃಷ್ಣಾಪುರದ ಜನತಾ ಕಾಲೊನಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ. ಮಗು ಪೋಷಕರಿಂದ ತಪ್ಪಿಸಿಕೊಂಡು ಹೋಗಿತ್ತು ಎಂದು ತಿಳಿದುಬಂದಿದೆ.