ಮುಲ್ಕಿ: ಪಡುಪಣಂಬೂರು ಹೊಯ್ಗೆಗುಡ್ಡೆಯಿಂದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಮತ್ತು ಅಂತರರಾಷ್ಟ್ರೀಯ ಸರ್ಫಿಂಗ್ ಮುಂಡಾ ಬೀಚ್ಗೆ ಸಂಪರ್ಕ ಕಲ್ಪಿಸುವ ಮೀನುಗಾರಿಕಾ ರಸ್ತೆ ಈಗ ಎಕ್ಕಟ್ಟಿ ಹೋಗಿದ್ದು, ಸಂಚಾರ ದುಸ್ತರವಾಗಿದೆ. ಅಕ್ರಮ ಮರಳು ಸಾಗಾಟ ಮತ್ತು ಭಾರೀ ವಾಹನಗಳ ಚಲನೆಯಿಂದ ರಸ್ತೆ ಗಂಭೀರವಾಗಿ ಹಾನಿಗೊಂಡಿದೆ.
ಅಭಯ ಚಂದ್ರ ಜೈನ್ ಸಚಿವರಾಗಿದ್ದ ಸಮಯದಲ್ಲಿ ಮೀನುಗಾರಿಕಾ ಇಲಾಖೆಯಿಂದ ಅಭಿವೃದ್ಧಿಪಡಿಸಿ ಲೋಕಾರ್ಪಣೆಗೊಳಿಸಲಾದ ಈ ರಸ್ತೆಗೆ ಇಂದು ಗತಿ-ಗೋತ್ರ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಬದಿಯಲ್ಲಿ ಹರಿಯುವ ಶಾಂಭವಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುವಿಕೆ ಮತ್ತು ಅದರ ಸಾಗಾಟವೇ ಈ ಹಾನಿಯ ಪ್ರಮುಖ ಕಾರಣವಾಗಿದೆ.
ಸ್ಥಳೀಯರ ಆರೋಪದಂತೆ, ಹೊಯ್ಗೆ ಮಾಫಿಯಾ ಡಾನ್‌ಗಳು ನಿರ್ಭಯವಾಗಿ ಅಕ್ರಮ ಮರಳು ಸಾಗಾಟ ಮಾಡಿ ರಸ್ತೆಯನ್ನು ನಾಶಪಡಿಸಿದ್ದಾರೆ. ರಸ್ತೆ ಬದಿಯ ನದೀ ತಡೆಗೋಡೆ ಕುಸಿದಿದ್ದು, ರಾತ್ರಿ ಸಮಯದಲ್ಲಿ ದೀಪವಿಲ್ಲದ ಕಾರಣ ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ಸಹ ನಡೆಯುತ್ತಿವೆ.
ಕಳೆದ ಬೇಸಿಗೆಯಲ್ಲಿ, ಮರಳು ಸಾಗಾಟದ ವಾಹನಗಳು ರಸ್ತೆಯಲ್ಲಿ ಉಂಟಾಗಿದ್ದ ಹೊಂಡಗಳಲ್ಲಿ ಸಿಲುಕಿಕೊಳ್ಳದಂತೆ ತಾತ್ಕಾಲಿಕವಾಗಿ ಡಾಮರ್ ಹುಡಿಯನ್ನು ಹಾಕಿ ಸಂಚಾರ ಸಾಧ್ಯವಾಗುವಂತೆ ಮಾಡಿದ್ದರು. ಆದರೆ, ಈ ಮಳೆಗಾಲದಲ್ಲಿ ಅದೆಲ್ಲಾ ಕೊಚ್ಚಿ ಹೋಗಿ, ಹೊಂಡಗಳು ಇನ್ನೂ ದೊಡ್ಡದಾಗಿವೆ.
ಈ ಸಮಸ್ಯೆಯನ್ನು ಪಡುಪಣಂಬೂರು ಗ್ರಾಮ ಸಭೆಯಲ್ಲಿ ಅನೇಕ ಬಾರಿ ಪ್ರಸ್ತಾಪಿಸಿದರೂ, ಮೀನುಗಾರಿಕಾ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಸ್ಥಳೀಯರು ಕೋಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ರಸ್ತೆಯ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಪ್ರಾರಂಭಿಸದಿದ್ದಲ್ಲಿ, ಮೀನುಗಾರಿಕಾ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.