ಬೆಂಗಳೂರು: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ, ಒಕ್ಕಲಿಗ ಯಾವ ಸಮುದಾಯದವರೇ ಆಗಿರಲಿ — ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕ್ಷಣದಿಂದಲೇ “ಕ್ರೈಸ್ತರು” ಎಂದು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೈಪಿಡಿ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮೀಕ್ಷೆಯ ಸಂದರ್ಭದಲ್ಲಿ ಮತಾಂತರಗೊಂಡವರು ತಮ್ಮ ಹಳೆಯ ಜಾತಿ ಹೆಸರನ್ನು ಸೇರಿಸುವ ಗೊಂದಲ ವ್ಯಕ್ತವಾಗಿದೆ. ಆದರೆ ಮತಾಂತರಗೊಂಡವರು ಸ್ಪಷ್ಟವಾಗಿ ಕ್ರೈಸ್ತರಾಗುತ್ತಾರೆ. ಈ ಸಂಬಂಧ ಅಂತಿಮ ತೀರ್ಮಾನವನ್ನು ಹಿಂದುಳಿದ ವರ್ಗಗಳ ಆಯೋಗವೇ ಕೈಗೊಳ್ಳಲಿದೆ. ನಮ್ಮ ಉದ್ದೇಶ ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸುವುದು” ಎಂದು ತಿಳಿಸಿದರು.
ಬಿಜೆಪಿ ಆರೋಪ
ಇದಕ್ಕೂ ಮೊದಲು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಅವರು, “ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ ಹೊಸ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್ ಸೇರಿ 100 ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಸಮುದಾಯದ ಹೆಸರಿನಲ್ಲಿ ದಾಖಲಿಸಲಾಗಿದೆ. ಇದು ಮೀಸಲಾತಿ ಸೌಲಭ್ಯಗಳನ್ನು ಕಬಳಿಸುವ ಹುನ್ನಾರಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ” ಎಂದು ಆರೋಪಿಸಿದರು.
ಅಲ್ಲದೆ, “ಸರ್ಕಾರದ ಪಟ್ಟಿಯಲ್ಲಿ ಕ್ಯಾಥೋಲಿಕ್, ಪ್ರೊಟೆಸ್ಟಂಟ್, ಪೆಂಟಕೋಸ್ಟ್ ಮೊದಲಾದ ಮೂಲ ಕ್ರಿಶ್ಚಿಯನ್ ಪಂಗಡಗಳ ಹೆಸರೇ ಇಲ್ಲ. ಅವರಿಗೆ ‘ಕ್ರಿಶ್ಚಿಯನ್’ ಎಂಬ ಒಟ್ಟಾರೆ ಗುರುತನ್ನು ನೀಡಲಾಗಿದೆ. ಆದರೆ ಮತಾಂತರಗೊಂಡವರು ಮಾತ್ರ ತಮ್ಮ ಹಳೆಯ ಜಾತಿಯ ಹೆಸರಿನೊಂದಿಗೆ ಸೇರಿದ್ದಾರೆ. ಇದು ಸಂಪೂರ್ಣ ರಾಜಕೀಯ ಆಟ” ಎಂದು ದೂರಿದರು.
ಪಟ್ಟಿಯನ್ನು ಕೈಬಿಡುವ ಒತ್ತಾಯ
ಈ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗವು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರನ್ನು ಭೇಟಿಯಾಗಿ, “ಕಾಂತರಾಜ ಸಮಿತಿ, ನಾಗಮೋಹನದಾಸ್ ಸಮೀಕ್ಷೆಯಲ್ಲಿ ಇಂತಹ ಪಟ್ಟಿ ಇರಲಿಲ್ಲ. ಈಗ ಏಕಾಏಕಿ ಸೇರಿಸಿರುವುದು ಅನುಮಾನಾಸ್ಪದ. ತಕ್ಷಣವೇ ಈ ಪಟ್ಟಿಯನ್ನು ಹಿಂತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿತು.