‘ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ’: ಯುವವಾಹಿನಿಯಿಂದ ನಾರಾಯಣ ಗುರು ಜಯಂತಿ, ಶಿಕ್ಷಕರ ದಿನಾಚರಣೆ

ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಉರ್ವ ಸ್ಟೋರ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಮಾತನಾಡಿ, “ಯುವವಾಹಿನಿಯು ಹಮ್ಮಿಕೊಳ್ಳುತ್ತಿರುವ ಶಿವಗಿರಿ ಯಾತ್ರೆಯ ಮೂಲಕ ಅನೇಕರಿಗೆ ನಾರಾಯಣ ಗುರುಗಳ ತತ್ವ ಸಂದೇಶಗಳು ಹಾಗೂ ಸಮಾಜದಲ್ಲಿ ತಂದ ಬದಲಾವಣೆಗಳ ಅರಿವು ಮೂಡುತ್ತಿದೆ. ‘ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ’ ಎಂಬ ಗುರುಗಳ ಸಂದೇಶದಂತೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.

ಮನೋಜ್ ಕುಮಾರ್ ವಾಮಂಜೂರು ಮಾತನಾಡಿ, “ವಿವೇಕಾನಂದರು ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನವನ್ನು ನಡೆಸಿದರೆ, ನಾರಾಯಣ ಗುರುಗಳು ಕೇರಳದಲ್ಲಿ ಅದೇ ರೀತಿಯ ಎರಡನೇ ಸರ್ವಧರ್ಮ ಸಮ್ಮೇಳನ ಆಯೋಜಿಸಿದ್ದರು. ಅಸಮಾನತೆಯಿಂದ ದೌರ್ಜನ್ಯಕ್ಕೊಳಗಾದ ಕೆಳವರ್ಗದ ಜನರು ಮತಾಂತರವಾಗುತ್ತಿದ್ದ ಸಂದರ್ಭದಲ್ಲಿ, ಜಾತಿ–ಮತ ಯಾವುದಾದರೂ ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಮಹತ್ವದ ಸಂದೇಶವನ್ನು ಗುರುಗಳು ನೀಡಿದರು” ಎಂದರು.

ಶಿಕ್ಷಕರ ದಿನಾಚರಣೆ ಕುರಿತು ಸವಿತಾ ಕೋಟ್ಯಾನ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಅಶೋಕ್ ಅಂಚನ್ ಕೋಡಿಕಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಾ ನಿರ್ದೇಶಕಿ ಉಷಾ ಸ್ವಾಗತಿಸಿ, ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು ವಂದಿಸಿದರು. ನಾರಾಯಣ ಗುರುಗಳ ತತ್ವ ಆದರ್ಶಗಳ ಪ್ರಚಾರ ನಿರ್ದೇಶಕ ಪೂವಪ್ಪ ಕುಕ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಜಯಂತಿ ಕೋಟ್ಯಾನ್ ಹಾಗೂ ಪೂರ್ಣಿಮಾ ಯು.ಆರ್. ಪ್ರಾರ್ಥನಾ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಭಕ್ತಿಯ ರಂಗ ತುಂಬಿದರು. ಘಟಕದ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

error: Content is protected !!