ಮಂಗಳೂರು: ಇತ್ತೀಚೆಗೆ ಸುರತ್ಕಲ್‌ನಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಾಧವಿ ಎಂಬವರು ರಸ್ತೆಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆಯಿಂದ ಆಕ್ರೋಶಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಅನ್ನು ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆಗೆ ಯತ್ನಿಸಿದರು. ಅಣುಕು ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸುತ್ತಾ ಪ್ರತಿಭಟನೆ ನಡೆಸಿದ ಕಾಂಗ್ರೆಸಿಗರು ಎನ್‌ಎಚ್‌ಎಐ, ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮೆರವಣಿಗೆಯ ಮೂಲಕ ನಂತೂರು ಸಮೀಪದ ಎನ್‌ಎಚ್‌ಎಐ ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಒಳಗಡೆ ಪ್ರವೇಶಿಸದಂತೆ ತಡೆದರು. ಆದರೂ ಮತ್ತೆ ನುಗ್ಗಿ ಬಂದ ಪ್ರತಿಭಟನಾಕಾರರ ಪೈಕಿ ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಿರುವುದರಿಂದ ಹಣ ಇಲ್ಲದೆ ದುರಸ್ತಿ ಕಾರ್ಯ ಆಗಿಲ್ಲ ಎಂಬ ಉದ್ಧಟತನದ ಹೇಳಿಕೆಯನ್ನು ಎನ್‌ಎಚ್‌ಎಐ ಅಧಿಕಾರಿಗಳು ನೀಡಿದ್ದಾರೆ. ಶೀಘ್ರವಾಗಿ ಗುಂಡಿಗಳನ್ನು ಮುಚ್ಚಿ ಜನರನ್ನು ಪ್ರಾಣ ಹಾನಿಯಿಂದ ರಕ್ಷಿಸಬೇಕು ಇಲ್ಲವಾದರೆ ನಾವು ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಶಾಸಕ ಐವನ್ ಡಿಸೋಜಾ, ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿಗಾಗಿ ಸಾಕಷ್ಟು ಹಣವಿದ್ದರೂ ದುರಸ್ತಿ ಕಾಯ ನಡೆದಿಲ್ಲ ಎಂದರೆ ಇದಕ್ಕೆ ನಿರ್ಲಕ್ಷ್ಯವೇ ಸಾಕ್ಷಿ. ಕೇಂದ್ರ ಸರ್ಕಾರ ಹೆದ್ದಾರಿ ನಿರ್ವಹಣೆಯಲ್ಲಿ ಎಡವಿದೆ. ರಸ್ತೆಯುದ್ದಕ್ಕೂ ಗುಂಡಿಗಳಿಂದಾಗಿ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಯುವ ಮುಖಂಡ ಮಿಥುನ್ ರೈ ಮಾತನಾಡಿ, ಹೆದ್ದರಿ ದುರವವಸ್ಥೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಇಲ್ಲಿನ ಸಂಸದ ಬ್ರಿಜೇಶ್ ಚೌಟರೇ ಕಾರಣ. ಕೂಡಲೇ ರಸ್ತೆಯನ್ನು ಸರಿಪಡಿಸಬೇಕು ಇಲ್ಲವಾದರೆ ಮತ್ತೆ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡ ಪದ್ಮರಾಜ್ ಮಾತನಾಡಿ, ರಸ್ತೆ ಗುಂಡಿಯಿಂದಾಗಿ ಅಮಾಯಕಿ ಮಾಧವಿ ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆದಿದ್ದು, ಇನ್ನೂ ಇದನ್ನು ಸರಿಪಡಿಸಿಲ್ಲ ಎಂದರೆ ಅದಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು. ಬಿಜೆಪಿಗೆ ಪಾಕಿಸ್ತಾನ, ಹಿಂದುತ್ವ ಇಂಥ ಹೇಳಿಕೆ ಬಿಟ್ಟರೆ ರಸ್ತೆ ಸರಿಪಡಿಸುವುದು, ಜನರ ಪ್ರಾಣ ಹಾನಿಯ ಬಗ್ಗೆ ಗಮನ ವಹಿಸುವುದಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ರಾ.ಹೆದ್ದಾರಿಗಳ ಗುಂಡಿಗಳಿಗೆ ಕೇವಲ ತೇಪೆ ಹಾಕುವ ಬದಲು ಗುಣಮಟ್ಟದ ರಸ್ತೆ ಮಾಡಬೇಕು.. ಕೇಂದ್ರ ಸರಕಾರವು ಇತ್ತೀಚೆಗೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸೇರಿದಂತೆ ರಾ.ಹೆದ್ದಾರಿಯ ಅವ್ಯವಸ್ಥೆಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೋ, ಮಮತಾ ಗಟ್ಟಿ, ಅಪ್ಪಿ, ಶ್ಯಾಲೆಟ್ ಪಿಂಟೋ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್, ಅನಿಲ್ ಕುಮಾರ್, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಹರಿನಾಥ್, ಭಾಸ್ಕರ ಕೆ., ಡೆನ್ನಿಸ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.