ಸುರತ್ಕಲ್: ಸುರತ್ಕಲ್ ವ್ಯಾಪ್ತಿಯಲ್ಲಿ ಕಳವು ಯತ್ನ ಪ್ರಕರಣಗಳು ಹೆಚ್ಚಿದ್ದು, ಕೆಲವರು ಅನಾಮಧೇಯ ಯುವಕರು ರಾತ್ರಿ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕತ್ತಿ ಹಿಡಿದುಕೊಂಡು ಹೋಗುವ ಯುವಕರ ಚಲನವಲನ ಪತ್ತೆಯಾಗಿದ್ದು, ನಾವು ಭೀತಿಯಲ್ಲಿ ದಿನಕಳೆಯುತ್ತಿದ್ದೇವೆ ಎಂದು ಸುರತ್ಕಲ್ ನಾಗರಿಕರು ಆರೋಪಿಸಿದ್ದಾರೆ.
ಸುರತ್ಕಲ್ ಭಾಗದಲ್ಲಿ ಕೆಲವೊಂದು ದಿನಗಳಿಂದ ಕಳವು ಯತ್ನ ನಡೆದಿದೆ. ಮುಂಚೂರು, ಮಧ್ಯ ಭಾಗದ ನಾಲ್ಕೈದು ಕಡೆಗಳಲ್ಲಿ ಕಳವು ಯತ್ನ ನಡೆದಿದ್ದು, ಕೆಲವು ಯುವಕರು ಕತ್ತಿ ಹಿಡಿದುಕೊಂಡು ಅನುಮಾನಾಸ್ಪದವಾಗಿ ಸಂಚರಿಸುವುದು, ಬಾಗಿಲು ಬಡಿಯುವ ಘಟನೆಗಳು ಎರಡ್ಮೂರು ಕಡೆಗಳಲ್ಲಿ ಕಂಡು ಬಂದಿದೆ. ಅಲ್ಲದೆ ಸುಭಾಷಿತ ನಗರದಲ್ಲೂ ಯುವಕರು ಅನುಮಾನಾಸ್ಪದವಾಗಿ ಸಂಚರಿಸುವುದು ಕಂಡು ಬಂದಿದ್ದು, ಕೆಲವೊಂದು ದೃಶ್ಯಗಳು ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸೆ.6ರ ರಾತ್ರಿ 11.30ರ ಸುಮಾರಿಗೆ ಸುರತ್ಕಲ್ ಕಾಂತೇರಿ ಧೂಮಾವತಿ ದೈವಸ್ಥಾನ ಸಮೀಪದ ಅಂಗಡಿ, ರಾಘವೇಂದ್ರ ಹೋಟೆಲ್ ಸಮೀಪ ಯುವಕರು ತಲ್ವಾರ್ ಹಿಡಿದುಕೊಂಡು ಸಂಚರಿಸುವುದು ಗೋಚರವಾಗಿದೆ. ರಾಘವೇಂದ್ರ ದೊಣ್ಣೆ ಬಿರಿಯಾನಿ ಹೋಟೆಲ್‌ಗೆ ಕಳ್ಳರು ನುಗ್ಗಿದ್ದು, ಹಣ ಕಳವು ಮಾಡಿದ್ದು, ಸಿಬ್ಬಂದಿ ಬೊಬ್ಬೆ ಹೊಡೆದಾಗ ಅವರು ತಲವಾರು ತೋರಿಸಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುರತ್ಕಲ್ ಭಾಗದಲ್ಲಿ ಕಳವು ಯತ್ನ ಹೆಚ್ಚಿದ್ದು, ಪೊಲೀಸರಿಗೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೆ ಪೊಲೀಸರು ಮಾತ್ರ ಆರೋಪಿಗಳನ್ನು ಹಿಂದು ಹಿಡಿಯುತ್ತೇವೆ, ನಾಳೆ ಹಿಡಿಯುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಈ ಘಟನೆಗಳಿಂದ ನಮಗೆ ಭಯ ಹೆಚ್ಚಿದ್ದು, ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆಹಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದೀಗ ಕೆಂಪು ಕಲ್ಲು, ಮರಳು ಲಭ್ಯವಿಲ್ಲದ ಕಾರಣ ಯುವಕರಿಗೆ ಕೆಲಸವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಪುಂಡ ಯುವಕರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಸ್ಥಳೀಯ ನಿವಾಸಿ ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ಸುರತ್ಕಲ್‌ನ ಆಪತ್ಬಾಂಧವ ಸಂಘಟನೆಯ ಉಮೇಶ್ ಇಡ್ಯಾ ಅವರು ವಾಯ್ಸ್ ಆಫ್ ಪಬ್ಲಿಕ್ ಜೊತೆ ಮಾತನಾಡಿ, ಸುರತ್ಕಲ್‌ನಲ್ಲಿ ಕಳ್ಳರ ಚಲನವಲನ ಹೆಚ್ಚಿದ್ದು, ತಲ್ವಾರ್ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ರಾಘವೇಂದ್ರ ದೊಣ್ಣೆ ಬಿರಿಯಾನಿ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಸಿಬ್ಬಂದಿ ಬೊಬ್ಬೆ ಹೊಡೆದಾಗ ತಲ್ವಾರ್ ತೋರಿಸಿ ಪರಾರಿಯಾಗಿದ್ದಾರೆ. ಸೆ.6ರಂದು ಈ ಘಟನೆ ನಡೆದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿಸಿ ಕ್ಯಾಮಾರದ ಫುಟೇಜ್ ನೀಡಿದ್ದೇವೆ. ಅದರಲ್ಲಿ ಚಹರೆ ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.\