ನವದೆಹಲಿ: ಆರ್ ಎಸ್ ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ದೇಶದಲ್ಲಿ ಸಮಾನತೆ, ಸಾಮರಸ್ಯ ಮತ್ತು ಸಹೋದರತ್ವವನ್ನು ಬಲಪಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇಂದು ಮೋಹನ್ ಭಾಗವತ್ ಅವರಿಗೆ 75 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಮೋದಿ, ಹಿರಿಯ ಆರ್‌ಎಸ್ ಎಸ್ ಮುಖ್ಯಸ್ಥರ ಕುರಿತು ತಮ್ಮ ಬ್ಲಾಗ್‌ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಸುಧೈವ ಕುಟುಂಬಕಂ ಎಂಬ ಮಂತ್ರದಿಂದ ಪ್ರೇರಿತರಾಗಿ ಮೋಹನ್ ಭಾಗವತ್ ಅವರು ತಮ್ಮಿಡೀ ಬದುಕನ್ನು ಸಮಾನತೆ, ಸಾಮರಸ್ಯ ಮತ್ತು ಸಹೋದರತ್ವ ಎಂಬ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟಿದ್ದಾರೆ. ಭಾರತ ಮಾತೆಯ ಸೇವೆಗೆ ಸದಾ ಸಿದ್ಧರಾಗಿರುವ ಮೋಹನ್ ಜೀ ಅವರ 75ನೇ ಹುಟ್ಟುಹಬ್ಬದ ಈ ವಿಶೇಷ ಸಂದರ್ಭದಲ್ಲಿ, ಅವರ ಸ್ಪೂರ್ತಿದಾಯಿ ವ್ಯಕ್ತಿತ್ವದ ಕುರಿತಾಗಿ ನನ್ನ ಭಾವನೆಗಳನ್ನು ಇಲ್ಲಿ ವ್ಯಕ್ತಪಡಿಸಿದ್ದೇನೆ. ಅವರಿಗೆ ದೀರ್ಘ, ಆರೋಗ್ಯಕರ ಜೀವನವನ್ನು ನಾನು ಹಾರೈಸುತ್ತೇನೆ ಎಂದು ಮೋದಿ ಬರೆದುಕೊಂಡಿದ್ದಾರೆ.
ಮೋಹನ್ ಭಾಗವತ್ ಅವರು 1970ರ ದಶಕದ ಮಧ್ಯಭಾಗದಲ್ಲಿ ಸಂಘದ ಪ್ರಚಾರಕರಾದರು. ಸಾಮಾನ್ಯ ಜೀವನದಲ್ಲಿ ಪ್ರಚಾರಕ್ ಎಂಬ ಪದವನ್ನು ಕೇಳಿದಾಗ, ಅವರು ಪ್ರಚಾರ ಮಾಡುವ ವ್ಯಕ್ತಿಯಾಗಿರಬೇಕು ಎಂಬ ಭ್ರಮೆ ಉಂಟಾಗುತ್ತದೆ. ಆದರೆ ಸಂಘವನ್ನು ಸರಿಯಾಗಿ ತಿಳಿದಿರುವವರಿಗೆ ಪ್ರಚಾರಕ್ ಸಂಪ್ರದಾಯವು ಸಂಘದ ಕೆಲಸದ ವಿಶೇಷತೆ ಎಂದು ಗೊತ್ತಿರುತ್ತದೆ. ಕಳೆದ 100 ವರ್ಷಗಳಲ್ಲಿ ದೇಶಭಕ್ತಿಯ ಸ್ಫೂರ್ತಿಯಿಂದ ತುಂಬಿದ ಸಾವಿರಾರು ಯುವಕರು, ಮಹಿಳೆಯರು ತಮ್ಮ ಮನೆ ಮತ್ತು ಕುಟುಂಬಗಳನ್ನು ತ್ಯಾಗ ಮಾಡಿದ್ದಾರೆ. ಸಂಘ ಪರಿವಾರದ ಮೂಲಕ ತಮ್ಮ ಇಡೀ ಜೀವನವನ್ನೇ ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಭಾಗವತ್ ಜೀ ಆ ಮಹಾನ್ ಸಂಪ್ರದಾಯದ ಬಲವಾದ ಕೇಂದ್ರಬಿಂದು ಎಂದು ಮೋದಿ ಗುಣಗಾನ ಮಾಡಿದ್ದಾರೆ.
ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಸಂದರ್ಭದಲ್ಲಿ ಮೋಹನ್ ಭಾಗವತ್ ಅವರ ಕಾರ್ಯಗಳನ್ನು ಶ್ಲಾಘಿಸಿದ ಮೋದಿ, ಆಗಿನ ಕಾಂಗ್ರೆಸ್ ಸರ್ಕಾರ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾಗ ಭಾಗವತ್ ಅವರು ಪ್ರಚಾರಕರ ಜವಾಬ್ದಾರಿ ವಹಿಸಿಕೊಂಡರು. ಪ್ರಚಾರಕರಾಗಿ, ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯನ್ನು ನಿರಂತರವಾಗಿ ಬಲಪಡಿಸಿದರು. ಮಹಾರಾಷ್ಟ್ರದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ವಿದರ್ಭದಲ್ಲಿ ಅವರು ಹಲವು ವರ್ಷಗಳ ಕಾಲ ಕೆಲಸ ಮಾಡಿದರು ಎಂದು ತಿಳಿಸಿದ್ದಾರೆ.
1990ರ ದಶಕದಲ್ಲಿ ಅಖಿಲ ಭಾರತ ಸಂಸ್ಥೆಯ ಮುಖ್ಯಸ್ಥರಾಗಿ ಮೋಹನ್ ಭಾಗವತ್ ಜಿ ಅವರ ಕೆಲಸವನ್ನು ಅನೇಕ ಸ್ವಯಂಸೇವಕರು ಇನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಭಾಗವತ್ ಜಿ ಬಿಹಾರದ ಹಳ್ಳಿಗಳಲ್ಲಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಳೆದರು. ಸಮಾಜ ಸಬಲೀಕರಣಗೊಳಿಸುವ ಕೆಲಸಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. 2000ರಿಂದ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. 2009ರಲ್ಲಿ ಸರ ಸಂಘಚಾಲಕ್ ಅಥವಾ ಸಂಘದ ಅಧ್ಯಕ್ಷರಾದರು. ಇದೀಗ ಇನ್ನೂ ಹೆಚ್ಚು ಶಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಭಾಗವತ್ ಜಿ ಯಾವಾಗಲೂ ರಾಷ್ಟ್ರದ ಮೂಲ ಸಿದ್ಧಾಂತವನ್ನು ಪ್ರಧಾನವಾಗಿ ಇಟ್ಟುಕೊಂಡವರು ಎಂದು ಮೋದಿ ತಿಳಿಸಿದ್ದಾರೆ.
ಭಾಗವತ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥರ ಪಾತ್ರಕ್ಕೆ ನ್ಯಾಯ ಒದಗಿಸಿ, ದಾರ್ಶನಿಕರ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರಸಂಘಚಾಲಕ್ ಆಗಿರುವುದು ಕೇವಲ ಸಾಂಸ್ಥಿಕ ಜವಾಬ್ದಾರಿಯಲ್ಲ. ಅದೊಂದು ಪವಿತ್ರ ನಂಬಿಕೆ. ಇದನ್ನು ದಾರ್ಶನಿಕ ವ್ಯಕ್ತಿಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಈ ದೇಶದ ನೈತಿಕ ಮತ್ತು ಸಾಂಸ್ಕೃತಿಕ ಹಾದಿಗೆ ನಿರ್ದೇಶನ ನೀಡಿದ್ದಾರೆ. ಅಸಾಧಾರಣ ವ್ಯಕ್ತಿಗಳ ವೈಯಕ್ತಿಕ ತ್ಯಾಗ, ಉದ್ದೇಶದಲ್ಲಿದ್ದ ಸ್ಪಷ್ಟತೆ ಮತ್ತು ಭಾರತ ಮಾತೆಗಾಗಿ ಅಚಲ ಸಮರ್ಪಣೆಯೊಂದಿಗೆ ಅಂಥ ಪಾತ್ರವನ್ನು ನಿರ್ವಹಿಸಿದ್ದಾರೆ. ಮೋಹನ್ ಭಾಗವತ್ ಅವರು ಇಂಥ ದೊಡ್ಡ ಜವಾಬ್ದಾರಿಗೆ ಸಂಪೂರ್ಣ ನ್ಯಾಯ ಒದಗಿಸಿದವರು. ಇದರ ಜೊತೆಗೆ ತಮ್ಮ ವೈಯಕ್ತಿಕ ಶಕ್ತಿ, ಬೌದ್ಧಿಕ ಆಳ ಮತ್ತು ಸಹಾನುಭೂತಿಯ ನಾಯಕತ್ವವನ್ನೂ ಸೇರಿಸಿದ್ದಾರೆ ಎಂಬುದು ಹೆಮ್ಮೆ ಎಂದು ಮೋದಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ, ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಕಾರ್ಯಗಳನ್ನು ಸ್ಮರಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಸ್ವಯಂಸೇವಕರು ಸಾಮಾಜಿಕ ಸೇವೆ ಮಾಡುವಂತೆ ಭಾಗವತ್ ಜೀ ನಿರ್ದೇಶನ ನೀಡಿದರು. ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವಂತೆ ಒತ್ತಿ ಹೇಳಿದರು. ಅವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ಅಗತ್ಯವಿರುವವರಿಗೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಒದಗಿಸಿದರು. ವಿವಿಧ ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಮಾಡಿದರು. ಜಾಗತಿಕ ಸವಾಲುಗಳು ಮತ್ತು ಜಾಗತಿಕ ಚಿಂತನೆಗೆ ಆದ್ಯತೆ ನೀಡುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದರು. ಆ ಸಂದರ್ಭದಲ್ಲಿ ನಾವು ಅನೇಕ ಸ್ವಯಂಸೇವಕರನ್ನು ಕಳೆದುಕೊಳ್ಳಬೇಕಾಯಿತು. ಆದರೆ ಭಾಗವತ್ ಜೀ ಅವರ ಸ್ಫೂರ್ತಿಯಿಂದಾಗಿ ಸ್ವಯಂಸೇವಕರ ಇಚ್ಛಾಶಕ್ತಿ ಯಾವುದೇ ಕಾರಣಕ್ಕೂ ದುರ್ಬಲಗೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.